ಅಹಮದಾಬಾದ್ ಸೆ. 10: ಗುಜರಾತ್‌ನ ಅಹಮದಾಬಾದ್ ಮತ್ತು ವಡೋದರಾ ನಗರಗಳ ಕನಿಷ್ಠ 28 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಬೆದರಿಕೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಶಾಲೆಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ, ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಹಮದಾಬಾದ್‌ನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ರೋಹಿತ್ ಚೌಧರಿ ತಿಳಿಸಿದ್ದಾರೆ. ಮಾಹಿತಿ ದೊರೆತ ಕೂಡಲೇ ಸಂಬಂಧಪಟ್ಟ ಶಾಲೆಗಳು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿವೆ.
ಇದೇ ವೇಳೆ ವಡೋದರಾ ನಗರದ ವಿವಿಧ ಪ್ರದೇಶಗಳಲ್ಲಿರುವ 13 ಶಾಲೆಗಳಿಗೂ ಇದೇ ರೀತಿಯ ಬೆದರಿಕೆ ಇಮೇಲ್‌ಗಳು ಬಂದಿವೆ. ವಿಷಯ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಶಾಲೆಗಳಿಗೆ ತೆರಳಿ ಪರಿಶೀಲನೆ ಆರಂಭಿಸಿದ್ದಾರೆ.
ಶಾಲೆಗಳಲ್ಲಿ ತೀವ್ರ ತಪಾಸಣೆ
ಸ್ಥಳೀಯ ಪೊಲೀಸರ ಜತೆಗೆ ವಿಶೇಷ ಕಾರ್ಯಾಚರಣೆ ಗುಂಪು (SOG), ಅಪರಾಧ ಶಾಖೆ ಹಾಗೂ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಸಿಬ್ಬಂದಿ ಶಾಲಾ ಆವರಣಗಳಲ್ಲಿ ಶೋಧ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಶಾಲೆಗಳಿಂದ ಹೊರಗೆ ಕಳುಹಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ವಡೋದರಾದ ಒಂಬತ್ತು ಶಾಲೆಗಳಲ್ಲಿ ಈಗಾಗಲೇ ತಪಾಸಣೆ ಪೂರ್ಣಗೊಂಡಿದ್ದು, ಉಳಿದ ಶಾಲೆಗಳಲ್ಲೂ ಪರಿಶೀಲನೆ ಮುಂದುವರಿದಿದೆ. ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಶಾಲೆಗಳ ವಿದ್ಯಾರ್ಥಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳಿಗೆ ಕಳುಹಿಸಲಾಗಿದೆ.
ಇಮೇಲ್ ಕಳುಹಿಸಿದವರಿಗಾಗಿ ತನಿಖೆ
ಬಾಂಬ್ ಬೆದರಿಕೆ ಇಮೇಲ್‌ಗಳ ಮೂಲ ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಮೇಲ್‌ಗಳನ್ನು ಕಳುಹಿಸಿದವರು ಯಾರು, ಯಾವ ಸ್ಥಳದಿಂದ ಅವುಗಳನ್ನು ಕಳುಹಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಇದೇ ವರ್ಷದ ಜನವರಿ 23ರಂದು ಅಹಮದಾಬಾದ್‌ನ ಹಲವು ಶಾಲೆಗಳಿಗೂ ಇದೇ ಮಾದರಿಯ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು. ನಂತರ ಅವು ಹುಸಿ ಬೆದರಿಕೆಗಳು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಇದೀಗ ಮತ್ತೆ ಹಲವು ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿರುವುದು ಆತಂಕ ಹೆಚ್ಚಿಸಿದೆ.
