ಹಿಮಾಚಲ ಪ್ರದೇಶದಲ್ಲಿ ಭೀಕರ ಬಸ್ ದುರಂತ: 12 ಮಂದಿ ಸಾ*ವು, ಹಲವರಿಗೆ ಗಂಭೀರ ಗಾಯ

Untitled design 2026 01 10T125842.678

ಶಿಮ್ಲಾ: ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿರ್ಮೌರ್ ಜಿಲ್ಲೆಯ ಹರಿಪುರ್ಧರ್ ಪ್ರದೇಶದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಸುಮಾರು 400 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಸೋಲನ್‌ನಿಂದ ರಾಜ್‌ಗಢ ಮತ್ತು ಹರಿಪುರ್ಧರ್ ಮೂಲಕ ಕುಪ್ವಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಹರಿಪುರ್ಧರ್ ಸಮೀಪದ ಕಡಿದಾದ ಇಳಿಜಾರಿನಲ್ಲಿ ಚಲಿಸುತ್ತಿತ್ತು. ಪರ್ವತದ ಕಿರಿದಾದ ರಸ್ತೆಯಲ್ಲಿ ತಿರುವು ಪಡೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಪ್ರಪಾತಕ್ಕೆ ಉರುಳಿದೆ. ಬಸ್ ಕಂದಕಕ್ಕೆ ಬಿದ್ದ ವೇಗಕ್ಕೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ಸಿನ ಅವಶೇಷಗಳ ನಡುವೆ ಪ್ರಯಾಣಿಕರು ಸಿಲುಕಿಕೊಂಡಿದ್ದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪೀಡಿತ ಕುಟುಂಬಗಳಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಪ್ರಧಾನ ಮಂತ್ರಿ ಕಚೇರಿ (PMO) ಕೂಡ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ.

Exit mobile version