ಧಾರವಾಡ: ಯೂಟ್ಯೂಬ್ನಲ್ಲಿ ಕಾಮಿಡಿ ವೀಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ ಧಾರವಾಡದ ಖ್ವಾಜಾ ಶಿರಹಟ್ಟಿ (ಮುಕಳೆಪ್ಪ) ಹಿಂದೂ ಯುವತಿ ಗಾಯತ್ರಿ ಜಾಲಿಹಾಳ್ ಅವರನ್ನು ಮದುವೆಯಾದ್ದು ವಿವಾದವಾಗಿತ್ತು. ಈ ಮದುವೆಯ ನೆಪಹಿಡಿದು ಮುಕಳೆಪ್ಪ ಅವರ ಮೇಲೆ ಲವ್ ಜಿಹಾದ್ ಮತ್ತು ಅಪಹರಣದ ದೋಷಾರೋಪಗಳು ಹೊರಿಸಿದ್ದು, ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದರು. ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಮುಕಳೆಪ್ಪ ಮತ್ತು ಪತ್ನಿ ಗಾಯತ್ರಿ ಜಾಲಿಹಾಳ್ ಒಂದು ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ, ಮುಕಳೆಪ್ಪ ಅವರು ತಮ್ಮ ಪತ್ನಿ ಗಾಯತ್ರಿ ಅವರೊಂದಿಗೆ ಕುಳಿತುಕೊಂಡು ಸಮಾಜದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಲವ್ ಜಿಹಾದ್ ಅಲ್ಲ ಬದಲಿಗೆ ಇಬ್ಬರ ಸ್ವಇಚ್ಛೆಯ ಇಷ್ಟದ ಮದುವೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಲವ್ ಮ್ಯಾರೇಜ್ ಆಗಿದೆಯೇ ಹೊರತು ಲವ್ ಜಿಹಾದ್ ಅಲ್ಲ ಎಂದು ಹೇಳಿದ್ದಾರೆ.ಇದರೊಟ್ಟಿಗೆ ನಾನು ಯಾರನ್ನೂ ಮತಾಂತರ ಮಾಡಿಲ್ಲ. ಗಾಯತ್ರಿ ಯಾವ ಧರ್ಮದಲ್ಲಿ ಹುಟ್ಟಿದ್ದಾರೋ, ಅದೇ ಧರ್ಮದಲ್ಲಿ ಮುಂದುವರೆಯುತ್ತಾರೆ. ನಾನೂ ನನ್ನ ಧರ್ಮದಲ್ಲೇ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಜನ್ಮತಃ ಕನ್ನಡಿಗ ಮತ್ತು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಕಳೆಪ್ಪ, “ಕಲಾವಿದರ ಮಧ್ಯೆ ಯಾವುದೇ ಜಾತಿ ತರಬೇಡಿ. ನಮ್ಮನ್ನು ಬದುಕಲು ಬಿಡಿ,” ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗಾಯತ್ರಿ ಜಾಲಿಹಾಳ್ ,ಈ ನಿರ್ಧಾರ ಸಂಪೂರ್ಣವಾಗಿ ನನ್ನದಾಗಿದೆ. ಯಾರೂ ನಮ್ಮ ಮೈಂಡ್ ವಾಷ್ ಮಾಡಿಲ್ಲ. ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದೇವೆ. ನಾವು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಇದು ನಮ್ಮ ಇಬ್ಬರ ನಿರ್ಧಾರ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ಕೈಮುಗಿದು, ದಯವಿಟ್ಟು ನಮ್ಮ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ. ನಮ್ಮನ್ನು ಸರಳವಾಗಿ ಬದುಕಲು ಬಿಡಿ,” ಎಂದು ಮನವಿ ಮಾಡಿದ್ದಾರೆ.





