ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ ಉದ್ಯೋಗದ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ್ದ ಖತರ್ನಾಕ್ ದಂಪತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಮತ್ತು ಆತನ ಪತ್ನಿ ಆರತಿ ಎಂದು ಗುರುತಿಸಲಾಗಿದ್ದು, ಇವರು ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗದ ಹೆಸರಿನಲ್ಲಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಕಿರಣ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಆಕರ್ಷಕ ರೀಲ್ಸ್‌ಗಳನ್ನು ಪ್ರಕಟಿಸಿ, ಯಾವುದೇ ಅನುಭವವಿಲ್ಲದೆ ಮನೆಯಲ್ಲೇ ಕುಳಿತು ತಿಂಗಳಿಗೆ ಉತ್ತಮ ಆದಾಯ ಗಳಿಸುವ ಅವಕಾಶವಿದೆ ಎಂದು ಪ್ರಚಾರ ಮಾಡುತ್ತಿದ್ದ. ಮೇಣದ ಬತ್ತಿ, ಅಗರಬತ್ತಿ ಹಾಗೂ ಡ್ರೈ ಫ್ರೂಟ್ಸ್ ಪ್ಯಾಕಿಂಗ್ ಮಾಡುವಂತಹ ಸುಲಭದ ಕೆಲಸ ನೀಡುವುದಾಗಿ ಹೇಳಿ ಜನರ ವಿಶ್ವಾಸ ಗಳಿಸುತ್ತಿದ್ದ. ಈ ಕೆಲಸಕ್ಕೆ ಸೇರ್ಪಡೆಯಾಗಲು ಕಚ್ಚಾ ವಸ್ತುಗಳ ಭದ್ರತಾ ಠೇವಣಿಯಾಗಿ ಒಂದು ಲಕ್ಷ ರೂಪಾಯಿ ಪಾವತಿಸಬೇಕಿದ್ದು, ಪ್ರತಿಯಾಗಿ ತಿಂಗಳಿಗೆ 23 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಲಾಗುತ್ತಿತ್ತು.
ಇನ್‌ಸ್ಟಾಗ್ರಾಂ ಜಾಹೀರಾತುಗಳನ್ನು ನಂಬಿದ ಅನೇಕರು ಉದ್ಯೋಗದ ನಿರೀಕ್ಷೆಯಲ್ಲಿ ತಮ್ಮ ಜೀವನದ ಉಳಿತಾಯ ಹಣವನ್ನೇ ಹೂಡಿಕೆ ಮಾಡಿದ್ದಾರೆ. ಕೆಲವರು ಸಾಲ ಮಾಡಿ ಹಣ ಸಂಗ್ರಹಿಸಿದ್ದರೆ, ಇನ್ನೂ ಕೆಲವರು ಆಭರಣಗಳನ್ನು ಅಡವಿಟ್ಟು ಹಣ ಪಾವತಿಸಿದ್ದಾರೆ. ಒಬ್ಬೊಬ್ಬರಿಂದ 2 ಲಕ್ಷ ರೂಪಾಯಿಯಿಂದ ಆರಂಭವಾಗಿ 20 ಲಕ್ಷ ರೂಪಾಯಿವರೆಗೂ ಠೇವಣಿ ರೂಪದಲ್ಲಿ ಹಣ ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೂರಾರು ಮಂದಿ ಈ ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ ದಂಪತಿ, ಹಣ ಸಂಗ್ರಹಿಸಿದ ಬಳಿಕ ಯಾವುದೇ ಪ್ಯಾಕಿಂಗ್ ಕೆಲಸ ಒದಗಿಸಿಲ್ಲ. ಅಲ್ಲದೆ, ಠೇವಣಿಯಾಗಿ ಪಡೆದ ಹಣವನ್ನು ಹಿಂತಿರುಗಿಸದೇ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದರು.
ಕಳೆದ ಕೆಲವು ತಿಂಗಳಿಂದ ಕೆಲಸವೂ ಸಿಗದೆ, ಕಟ್ಟಿದ ಹಣವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಸಂತ್ರಸ್ತರು ಆತಂಕಕ್ಕೊಳಗಾಗಿದ್ದರು. ಕೊನೆಗೆ ಹಲವರು ಸೇರಿ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ವಿಶೇಷ ತನಿಖೆ ಆರಂಭಿಸಿದರು.
ತಾಂತ್ರಿಕ ಮಾಹಿತಿ ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ಕಿರಣ್ ಹಾಗೂ ಆರತಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಂಚನೆಯ ಹಣವನ್ನು ಎಲ್ಲಿಗೆ ವರ್ಗಾಯಿಸಲಾಗಿದೆ, ಇನ್ನೂ ಎಷ್ಟು ಜನರಿಂದ ಹಣ ಸಂಗ್ರಹಿಸಲಾಗಿದೆ ಹಾಗೂ ಈ ಕೃತ್ಯದಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಉದ್ಯೋಗದ ಆಮಿಷದ ಜಾಹೀರಾತುಗಳನ್ನು ಪರಿಶೀಲಿಸದೇ ನಂಬಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
