ಕರ್ನಾಟಕದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಕನ್ನಡ ಭಾಷೆಯ ಘನತೆ, ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕನ್ನಡದ ಚಿಂತನಾ ಪರಂಪರೆಯನ್ನು ಸಾರುವ 110 ಕನ್ನಡ ನುಡಿ ಫಲಕಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧವು ಕೇವಲ ಆಡಳಿತದ ಕಟ್ಟಡವಲ್ಲ. ಅದು ಕನ್ನಡ ನಾಡಿನ ಸ್ವಾಭಿಮಾನ, ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವೂ ಹೌದು. ಇಂತಹ ಜನರ ಅರಮನೆಯ ಆಯ್ದ ಸ್ಥಳಗಳಲ್ಲಿ ಕನ್ನಡದ ಮಹತ್ವದ ಚಿಂತನೆಗಳು ಮತ್ತು ಮೌಲ್ಯಗಳನ್ನು ಸಾರುವ ನುಡಿ ಫಲಕಗಳನ್ನು ಅಳವಡಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಆಡಳಿತ ಕೇಂದ್ರದಲ್ಲಿ ಕನ್ನಡದ ಧ್ವನಿ ನಿರಂತರವಾಗಿ ಮೊಳಗಬೇಕೆಂಬ ಆಶಯ ಈ ಯೋಜನೆಯ ಹಿಂದಿದೆ ಎಂದರು.
ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ದೂರದೃಷ್ಟಿ ಮತ್ತು ಸಂಕಲ್ಪದ ಫಲವಾಗಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ವಿಧಾನಸೌಧವು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು 1951ರ ಜುಲೈ 13ರಂದು ಶಂಕು ಸ್ಥಾಪನೆ ನೆರವೇರಿಸಿದ ಈ ಭವ್ಯ ಕಟ್ಟಡವು 1956ರಲ್ಲಿ ಉದ್ಘಾಟನೆಗೊಂಡಿತು. ದ್ರಾವಿಡ ವಾಸ್ತುಶಿಲ್ಪದ ಗುಣಗಳೊಂದಿಗೆ ತಂಜವೂರಿನ ಬೃಹದೀಶ್ವರ ದೇವಾಲಯ ಮತ್ತು ಕರ್ನಾಟಕದ ಸೋಮನಾಥಪುರ ದೇವಾಲಯಗಳ ವಾಸ್ತುಶಿಲ್ಪಗಳ ಪ್ರೇರಣೆಯನ್ನು ಮೈಗೂಡಿಸಿಕೊಂಡಿರುವ ವಿಧಾನಸೌಧದಲ್ಲಿ ಅಭಿಜಾತ ಯುರೋಪಿಯನ್ ಮತ್ತು ಇಂಡೋ ಸಾರ್ಸೆನಿಕ್ ಶೈಲಿಗಳ ಸೊಬಗನ್ನು ಕಾಣಬಹುದು ಎಂದು ತಿಳಿಸಿದರು.
ಕಲ್ಲಿನಲ್ಲಿ ಕೆತ್ತಿದ ಮಹಾಕಾವ್ಯದಂತಿರುವ ಜನರ ಅರಮನೆಯ ಆಯ್ದ 110 ಸ್ಥಳಗಳಲ್ಲಿ ಕನ್ನಡದ ನುಡಿ ಫಲಕಗಳನ್ನು ಅಳವಡಿಸಲಾಗಿದೆ. ಪಂಪ, ಅಲ್ಲಮ, ಬಸವಣ್ಣ, ಕುವೆಂಪು, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಸಿದ್ದಲಿಂಗಯ್ಯ, ಜಯದೇವಿತಾಯಿ ಲಿಗಾಡೆ, ಆರ್.ಕಲ್ಯಾಣಮ್ಮ ಸೇರಿದಂತೆ 55 ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಮಹನೀಯರ ಬರಹಗಳಿಂದ ಈ ಘೋಷವಾಕ್ಯಗಳನ್ನು ಆಯ್ಕೆ ಮಾಡಿದೆ. ಇವು ಕೇವಲ ಅಲಂಕಾರಿಕ ಫಲಕಗಳಲ್ಲ. ಕನ್ನಡ ನಾಡಿನ ಚಿಂತನೆ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂದೇಶಗಳಾಗಿವೆ ಎಂದು ಬಿಳಿಮಲೆ ತಿಳಿಸಿದರು.
ವಿಧಾನಸೌಧಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕನ್ನಡದ ಮಹತ್ವದ ಚಿಂತನೆಗಳು ಪರಿಚಯವಾಗಬೇಕು. ಆಡಳಿತಸೌಧಗಳ ಗೋಡೆಗಳು ಕನ್ನಡ ನುಡಿ, ನಾಡಿನ ಮೌಲ್ಯಗಳ ಕುರಿತಂತೆ ಮಾತನಾಡುವಂತಾಗಬೇಕು. ಕನ್ನಡದ ಸಾರ್ವಭೌಮತ್ವವನ್ನು ಸಾರ್ವಜನಿಕ ಬದುಕಿನ ಪ್ರತಿಯೊಂದು ವಲಯದಲ್ಲಿಯೂ ಪ್ರತಿಪಾದಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇಂತಹ ಪ್ರಯತ್ನಗಳ ಉದ್ದೇಶವಾಗಿದೆ ಎಂದು ಬಿಳಿಮಲೆ ಹೇಳಿದರು.
ಇದೇ ಸಂದರ್ಭದಲ್ಲಿ ಈ ಯೋಜನೆಯನ್ನು ಲೋರ್ಕಾಪಣೆಗೊಳಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಬಿಳಿಮಲೆ, ಈ ಯೋಜನೆಗೆ ಅನುಮೋದನೆಯನ್ನು ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರವನ್ನು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಹಾಗೂ ತಾಲೂಕುಸೌಧಗಳ ಪಡಸಾಲೆಗಳಲ್ಲಿ ಕನ್ನಡದ ನುಡಿ ಫಲಕಗಳನ್ನು ಅಳವಡಿಸಲು ಸರ್ಕಾರದ ವತಿಯಿಂದ ಸೂಕ್ತ ನಿರ್ದೇಶನವನ್ನು ನೀಡಲಾಗುವುದೆಂದು ತಿಳಿಸಿದ ಬಿಳಿಮಲೆ, ಈ ಬಗ್ಗೆ ಪ್ರಾಧಿಕಾರವು ಮುದ್ರಿಸುತ್ತಿರುವ ಕನ್ನಡ ನುಡಿ ಫಲಕಗಳ ಕಿರುಹೊತ್ತಿಗೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸರ್ಕಾರದ ಸಚಿವರಾದ ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ, ರಿಜ್ವಾನ್ ಅರ್ಷದ್, ಯು.ಟಿ.ಖಾದರ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮ್ಮದ್, ರಾಮಲಿಂಗಾರೆಡ್ಡಿ, ಎಚ್.ಸಿ. ಬಾಲಕೃಷ್ಣ, ಎಚ್.ಸಿ. ಮುನಿಯಪ್ಪ ಮತ್ತಿತರರು ಹಾಜರಿದ್ದರು.
