ಬೆಂಗಳೂರು: ವಂದೇ ಮಾತರಂ ಗೀತೆಯನ್ನು ಟೆಲಿಪ್ರಾಂಪ್ಟರ್ ಸಹಾಯವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಪೂರ್ಣವಾಗಿ ಹಾಡಿದರೆ ತಾನು ರಾಜೀನಾಮೆ ನೀಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ವಂದೇ ಮಾತರಂ ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, 1937ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಹಲವು ನಾಯಕರು ಈ ಕುರಿತು ತೀರ್ಮಾನ ಕೈಗೊಂಡಿದ್ದರು. ಅದರಂತೆ ಎರಡು ಪ್ಯಾರಾಗಳನ್ನು ಮಾತ್ರ ಹಾಡುವ ಸಂಪ್ರದಾಯವನ್ನು ದೇಶದಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಇದೀಗ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಂದೇ ಮಾತರಂ ವಿಚಾರದಲ್ಲಿ ದೇಶಪ್ರೇಮದ ಬಗ್ಗೆ ಮಾತನಾಡುತ್ತಿವೆ. ಅವರಿಗೆ ಸಂಪೂರ್ಣ ವಂದೇ ಮಾತರಂ ಗೀತೆ ಹಾಡಲು ಬರುತ್ತದೆಯೇ ಎಂಬುದನ್ನು ನೋಡೋಣ. ಕನಿಷ್ಠ ಮೊದಲ ಎರಡು ಪ್ಯಾರಾಗಳನ್ನಾದರೂ ಹಾಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ವಂದೇ ಮಾತರಂನ ಕೊನೆಯ ಭಾಗ ತನಗೂ ಸಂಪೂರ್ಣವಾಗಿ ತಿಳಿದಿಲ್ಲ ಎಂದರು.
‘ನಮಸ್ತೇ ಸದಾ ವತ್ಸಲೇ’ ಬದಲು ವಂದೇ ಮಾತರಂ ಹಾಡಲಿ
ಆರ್‌ಎಸ್‌ಎಸ್ ಶಾಖೆಗಳಲ್ಲಿ ‘ನಮಸ್ತೇ ಸದಾ ವತ್ಸಲೇ’ ಹಾಡುವ ಬದಲು ವಂದೇ ಮಾತರಂ ಗೀತೆಯನ್ನು ಹಾಡಲಿ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಕೈಜೋಡಿಸಿ ವಂದೇ ಮಾತರಂ ಹಾಡಲಿ. ಬಳಿಕ ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶಪ್ರೇಮದ ಬಗ್ಗೆ ಮಾತನಾಡಲಿ ಎಂದು ಸಚಿವರು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಬೋಸ್, ನೆಹರೂ, ಪಟೇಲ್ ಮತ್ತು ಟ್ಯಾಗೋರ್ ಅವರಂತಹ ನಾಯಕರು ದೇಶದ್ರೋಹಿಗಳೇ ಎಂದು ಪ್ರಶ್ನಿಸಿದರು.
ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ನಿರುದ್ಯೋಗ, ಆರ್ಥಿಕ ಪರಿಸ್ಥಿತಿ, ಮಹಿಳೆಯರ ಸುರಕ್ಷತೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸರ್ಕಾರ ಏಕೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪಿಎಂ ಕೇರ್ಸ್ ಫಂಡ್, ರಾಮಮಂದಿರ ಚಂದಾ ಅವ್ಯವಹಾರ, ವಿದೇಶಾಂಗ ನೀತಿ ಹಾಗೂ ರೈತರ ಸಮಸ್ಯೆಗಳ ಕುರಿತು ಉತ್ತರ ನೀಡಬೇಕಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಸ್ನೇಹದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಬಂದ ನಂತರ 75 ವರ್ಷಗಳಿಂದ ಎರಡು ಚರಣಗಳ ವಂದೇ ಮಾತರಂ ಗೀತೆಯೊಂದಿಗೆ ದೇಶ ನಡೆದುಕೊಂಡು ಬಂದಿದೆ. ಇದೀಗ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ನಿಜವಾಗಿಯೂ ಕಾಳಜಿ ಇದ್ದರೆ ಮೋದಿ ಮತ್ತು ಅಮಿತ್ ಶಾ ಅವರು ಯಾವುದೇ ಟೆಲಿಪ್ರಾಂಪ್ಟರ್ ಬಳಸದೆ ಸಂಪೂರ್ಣ ವಂದೇ ಮಾತರಂ ಹಾಡಲಿ. ಹಾಗೆ ಮಾಡಿದರೆ ತಾನೇ ರಾಜೀನಾಮೆ ನೀಡುವುದಾಗಿ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದರು.
