ಬೆಂಗಳೂರು, ನವೆಂಬರ್ 19, 2025: ಯುನೈಟೆಡ್ ಕಿಂಗ್‌ಡಮ್ ನ ಹೋಮ್‌ಲ್ಯಾಂಡ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಸೆಕ್ಟರ್‌ನ ಉನ್ನತ ಮಟ್ಟದ ನಿಯೋಗವು ಇಂದು ಬೆಂಗಳೂರಿನ ನೂರ್ಖಾನಾ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿತು. ನಿಯೋಗಕ್ಕೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಆತ್ಮೀಯ ಸ್ವಾಗತ ಕೋರಿದರು.
ನಿಯೋಗದ ನೇತೃತ್ವವನ್ನು ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ವಹಿಸಿದ್ದರು. ಯುಕೆ ಪ್ರಧಾನ ಪೋಲೀಸಿಂಗ್ ಮತ್ತು ಭದ್ರತಾ ಸಲಹೆಗಾರ ರಾಬರ್ಟ್ ಬಾರ್ನ್ಸ್ ಸೇರಿದಂತೆ ಒಂಬತ್ತು ಪ್ರಮುಖ ಬ್ರಿಟಿಷ್ ಕಂಪನಿಗಳ ಸಿಇಒಗಳು ಮತ್ತು ತಾಂತ್ರಿಕ ತಜ್ಞರು ತಂಡದಲ್ಲಿದ್ದರು. ಈ ಕಂಪನಿಗಳು ಫೋರೆನ್ಸಿಕ್ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಅತ್ಯಾಧುನಿಕ ಸ್ಕ್ಯಾನಿಂಗ್ ಸಿಸ್ಟಂ, ಕ್ರೌಡ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಹಾಗೂ ಡ್ರೋನ್-ಆಧಾರಿತ ಸುರಕ್ಷತಾ ಪರಿಹಾರಗಳಲ್ಲಿ ಪರಿಣತಿ ಹೊಂದಿವೆ.
ಕರ್ನಾಟಕ ಪೊಲೀಸರಿಗೆ ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳನ್ನು ಪರಿಚಯಿಸುವುದು ಮತ್ತು ಭವಿಷ್ಯದಲ್ಲಿ ಜಂಟಿ ಸಹಕಾರಕ್ಕೆ ಚೌಕಟ್ಟು ರೂಪಿಸುವುದು ಭೇಟಿಯ ಮುಖ್ಯ ಉದ್ದೇಶವಾಗಿದೆ. ನಿಯೋಗದ ಸದಸ್ಯರು ಪ್ರಧಾನ ಕಚೇರಿಯ ಸಭಾಂಗಣದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಇಲ್ಲಿ AI-ಆಧಾರಿತ ಫೇಸ್ ರೆಕಗ್ನಿಷನ್ ಸಿಸ್ಟಂ, ಸೈಬರ್ ದಾಳಿಗಳನ್ನು ತಡೆಗಟ್ಟುವ ರಿಯಲ್-ಟೈಮ್ ಥ್ರೆಟ್ ಡಿಟೆಕ್ಷನ್ ಸಾಫ್ಟ್‌ವೇರ್, ಗಲಭೆ ನಿಯಂತ್ರಣಕ್ಕೆ ಧ್ವನಿ ಆಧಾರಿತ ನಾನ್-ಲೆಥಲ್ ಆಯುಧಗಳು, ಹೈ-ರೆಸಲ್ಯೂಷನ್ ಡ್ರೋನ್ ಕ್ಯಾಮೆರಾಗಳು ಸೇರಿದಂತೆ ಹಲವು ಸುಧಾರಿತ ಉಪಕರಣಗಳನ್ನು ಪ್ರದರ್ಶಿಸಲಾಯಿತು.
ಡಾ. ಎಂ.ಎ. ಸಲೀಂ ಅವರು ನಿಯೋಗದೊಂದಿಗೆ ದೀರ್ಘ ಚರ್ಚೆ ನಡೆಸಿದರು. ಕರ್ನಾಟಕ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಕೇಂದ್ರ. ಸೈಬರ್ ಅಪರಾಧಗಳು, ಭಯೋತ್ಪಾದನೆ, ಗಲಭೆ ನಿಯಂತ್ರಣ ಮತ್ತು ಫೋರೆನ್ಸಿಕ್ ತನಿಖೆಯಲ್ಲಿ ನಮ್ಮ ಮುಂದಿರುವ ಸವಾಲುಗಳು ದೊಡ್ಡವು. ಯುಕೆಯಂತಹ ದೇಶದೊಂದಿಗೆ ತಾಂತ್ರಿಕ ಸಹಕಾರ ಹೊಂದಿದರೆ ನಮ್ಮ ಪೊಲೀಸಿಂಗ್‌ನ ಗುಣಮಟ್ಟ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚರ್ಚೆಯಲ್ಲಿ ಮುಂದಿನ ಒಂದು ವರ್ಷದೊಳಗೆ ಜಂಟಿ ತರಬೇತಿ ಕಾರ್ಯಕ್ರಮಗಳು, ಸೈಬರ್ ಫೋರೆನ್ಸಿಕ್ ಲ್ಯಾಬ್ ಸ್ಥಾಪನೆಗೆ ತಾಂತ್ರಿಕ ನೆರವು, ಕರ್ನಾಟಕದ ಪ್ರಮುಖ ನಗರಗಳಲ್ಲಿ AI-ಆಧಾರಿತ ಸ್ಮಾರ್ಟ್ ಸಿಟಿ ಸೆಕ್ಯುರಿಟಿ ಸಿಸ್ಟಂ ಅಳವಡಿಕೆ ಮತ್ತು ಭಾರಿ ಸಮೂಹ ಸಮಾರಂಭಗಳಲ್ಲಿ ಕ್ರೌಡ್ ಮ್ಯಾನೇಜ್‌ಮೆಂಟ್‌ಗೆ ಡ್ರೋನ್ ತಂತ್ರಜ್ಞಾನ ಬಳಕೆಯ ಬಗ್ಗೆ ವಿವರವಾದ ಚರ್ಚೆ ನಡೆಯಿತು.
ಯುಕೆ ಸಲಹೆಗಾರ ರಾಬರ್ಟ್ ಬಾರ್ನ್ಸ್ ಮಾತನಾಡಿ, ಕರ್ನಾಟಕ ಪೊಲೀಸರ ತಾಂತ್ರಿಕ ಸಿದ್ಧತೆ ಮತ್ತು ಮುಂದಾಲೋಚನೆ ನೋಡಿ ನಮಗೆ ಆಶ್ಚರ್ಯವಾಯಿತು. ಯುಕೆಯ ಅತ್ಯುತ್ತಮ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಳ್ಳಲು ಸಂಪೂರ್ಣ ಸಿದ್ಧತೆ ಇದೆ. ಇದೊಂದು ದೀರ್ಘಕಾಲಿಕ ಪಾಲುದಾರಿಕೆಯ ಆರಂಭ ಮಾತ್ರ ಎಂದಿದ್ದಾರೆ.
ಈ ಭೇಟಿಯು ಕರ್ನಾಟಕ ಪೊಲೀಸ್‌ಗೆ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಬೆಂಬಲ ದೊರೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಸೈಬರ್ ಅಪರಾಧ ತಡೆಗಟ್ಟುವಿಕೆ, ಫೋರೆನ್ಸಿಕ್ ತನಿಖೆಯ ಗುಣಮಟ್ಟ ಹೆಚ್ಚಿಸುವುದು ಹಾಗೂ ಜನಸಾಮಾನ್ಯರ ಸುರಕ್ಷತೆಗೆ ತಂತ್ರಜ್ಞಾನಾಧಾರಿತ ಪರಿಹಾರಗಳನ್ನು ತ್ವರಿತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಸಹಕಾರ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
