ತುಮಕೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ತುಮಕೂರು ಜಿಲ್ಲೆಯಲ್ಲಿ ಆಘಾತಕಾರಿ ದುರಂತವೊಂದು ನಡೆದಿದೆ. ಅಮಾವಾಸ್ಯೆ ದಿನದಂದು ಕೆರೆಗೆ ಬಿದ್ದು ತಂದೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಜಲಸಮಾಧಿಯಾಗಿದ್ದಾರೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದಲ್ಲಿ ನಡೆದಿದ್ದು, ಮೃತರನ್ನು ಯರೇಕಟ್ಟೆ ಗ್ರಾಮದ ವೆಂಕಟೇಶ್ (47), ಅವರ ಮಗಳು ಶ್ರಾವ್ಯ (12) ಹಾಗೂ ವೆಂಕಟೇಶ್ ಅಣ್ಣನ ಮಗನ ಮಗಳು ಪುಣ್ಯ (12) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಸುಮಾರು 4:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮನೆಯವರು ಸಂತಸದಿಂದಿದ್ದರು. ಆದರೆ, ಗ್ರಾಮದ ಕೆರೆಯ ಬಳಿ ಮೂರು ಮಂದಿ ಹೋಗಿದ್ದರು. ಮೊದಲು ಶ್ರಾವ್ಯ ಹಾಗೂ ಪುಣ್ಯ ಕೆರೆಯ ಬಳಿ ಆಡುತ್ತಿದ್ದರು. ಕೆರೆಯ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಶ್ರಾವ್ಯ ಕಾಲು ಜಾರಿ ಕೆರೆಗೆ ಬಿದ್ದಳು ಎಂದು ಹೇಳಲಾಗಿದೆ. ತನ್ನ ಸ್ನೇಹಿತೆಯನ್ನು ರಕ್ಷಿಸಲು ಪುಣ್ಯ ಕೂಡ ಕೆರೆಗೆ ಧುಮುಕಿದಳು. ಆದರೆ, ಇಬ್ಬರಿಗೂ ಈಜು ಬಾರದ ಕಾರಣ ಅವರು ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಈ ಸಮಯದಲ್ಲಿ ಮತ್ತೊಬ್ಬ ಬಾಲಕಿ, ಮನೆಗೆ ಬಂದು ಕೆರೆಗೆ ಬಿದ್ದಿರುವ ವಿಷಯವನ್ನು ತಿಳಿಸಿದಳು. ಕೂಡಲೇ ವೆಂಕಟೇಶ್ ಹಾಗೂ ಮಂಜುನಾಥ್ (ವೆಂಕಟೇಶ್ ಅಣ್ಣನ ಮಗ) ರಕ್ಷಣಾ ಕಾರ್ಯಕ್ಕೆ ತೆರಳಿದರು. ಆದರೆ, ಬಾಲಕಿಯರನ್ನು ರಕ್ಷಿಸುವ ಪ್ರಯತ್ನದಲ್ಲಿ ವೆಂಕಟೇಶ್ ಕೂಡ ಕಾಲು ಜಾರಿ ಕೆರೆಗೆ ಬಿದ್ದರು. ಅವರಿಗೂ ಈಜು ಬಾರದಿದ್ದರಿಂದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ವೆಂಕಟೇಶ್ ಹಾಗೂ ಶ್ರಾವ್ಯ ಸ್ಥಳದಲ್ಲೇ ಮೃತಪಟ್ಟರೆ, ಪುಣ್ಯಳನ್ನು ಹುಳಿಯಾರು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಅವಳು ಕೊನೆಯುಸಿರೆಳೆದಳು.ಈ ಘಟನೆಯಿಂದ ಮೃತರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಆಕ್ರಂದನದಿಂದ ಮುಗಿಲು ಮುಟ್ಟಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಮೃತರ ದೇಹಗಳನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.





