ಬೆಂಗಳೂರು: ಬಣ್ಣಬಣ್ಣದ ಲಾಭಾಂಶ ಆಸೆ ತೋರಿಸಿ ಬೆಂಗಳೂರಿನ ಸಾವಿರಾರು ಜನರ ಹಣವನ್ನು ಲೂಟಿ ಮಾಡುತ್ತಿರುವ ‘ಸ್ಮಾರ್ಟ್ ವೈಸ್ ಕ್ವಾಂಟ್’ (ಬ್ಲೇಡ್ ಕಂಪನಿ) ಎಂಬ ಏಜೆಂಟ್ ಸಂಸ್ಥೆಯ ವಿರುದ್ಧ ತೀವ್ರ ಆರೋಪಗಳು ಕೇಳಿಬರುತ್ತಿವೆ. ವಿದೇಶದಲ್ಲಿ ಕುಳಿತು ಭಾರತೀಯರನ್ನು ವಂಚಿಸುತ್ತಿರುವ ಈ ಗ್ಯಾಂಗ್ 2,300 ರೂಪಾಯಿ ಹೂಡಿಕೆಗೆ 16 ಸಾವಿರ ಲಾಭಾಂಶ ಎಂದು ಆಮಿಷ ಹಾಕಿ ಲಕ್ಷಾಂತರ ಜನರನ್ನು ಬಲೆಗೆ ಬೀಳಿಸಿದೆ ಎಂದು ಹೂಡಿಕೆದಾರರು ಆರೋಪಿಸುತ್ತಿದ್ದಾರೆ.
ಕಂಪನಿಯವರೇ ಹೇಳಿಕೊಂಡಂತೆ ಸುಮಾರು 12 ಲಕ್ಷ ಮಂದಿ ಹೂಡಿಕೆ ಮಾಡಿದ್ದಾರಂತೆ. ಬಿಟ್‌ಕಾಯಿನ್, ಕ್ರೂಡ್ ಆಯಿಲ್, ಷೇರ್ ಮಾರ್ಕೆಟ್ ಹೆಸರಲ್ಲಿ ವಿವಿಧ ಸ್ಕೀಮ್‌ಗಳ ಮೂಲಕ ಹಣ ಸಂಗ್ರಹಿಸುತ್ತಿದ್ದ ಈ ಸಂಸ್ಥೆ, ಆರಂಭದಲ್ಲಿ ಕೆಲವರಿಗೆ ಸಣ್ಣಪುಟ್ಟ ಲಾಭಾಂಶ ನೀಡಿ ನಂಬಿಕೆ ಗಳಿಸುತ್ತಿತ್ತು. ನಂತರ ದೊಡ್ಡ ಮೊತ್ತ ಹೂಡಿಕೆಗೆ ಪ್ರೇರೇಪಿಸಿ ಹಣವನ್ನು ಲಪಟಾಯಿಸುತ್ತಿತ್ತು ಎನ್ನಲಾಗಿದೆ.
ಹೂಡಿಕೆದಾರರನ್ನು ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಸಿ, ಅಲ್ಲಿ ಲಾಭಾಂಶದ ಸ್ಕ್ರೀನ್‌ಶಾಟ್‌ಗಳ ಮಳೆಗರೆಯುತ್ತಿದ್ದರು. 2,300 ರೂಪಾಯಿ ಮೊದಲ ಹೂಡಿಕೆಯಿಂದ ಒಂದು ಲಕ್ಷ ರೂಪಾಯಿ ವರೆಗೂ ಬಂಡವಾಳ ಹಾಕುವಂತೆ ಪ್ರಚಾರ ಮಾಡುತ್ತಿದ್ದರು. ಆರ್.ಟಿ. ನಗರದಲ್ಲಿರುವ ಸ್ಥಳೀಯ ಕಚೇರಿಯಲ್ಲಿ ಅರುಣಾಚಲಂ, ಪಾರ್ವತೀಸ್, ಸಿಮ್ರಾನ್ ಪಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು ಎನ್ನಲಾಗಿದೆ. ತಮಿಳುನಾಡು ಮತ್ತು ಆಂಧ್ರ ಮೂಲದ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗ ಸ್ಥಿತಿ ಬದಲಾಗಿದೆ. ಹೂಡಿಕೆದಾರರಿಗೆ ಅಸಲು ಹಣವೂ ಹಿಂದಿರುಗುತ್ತಿಲ್ಲ, ಲಾಭಾಂಶವೂ ಬರುತ್ತಿಲ್ಲ. ವಾಟ್ಸಾಪ್ ಗ್ರೂಪ್ ಹೆಡ್‌ಗಳು, ಬ್ರ್ಯಾಂಚ್ ಮ್ಯಾನೇಜರ್‌ಗಳು ಫೋನ್ ಎತ್ತುವುದನ್ನೇ ನಿಲ್ಲಿಸಿದ್ದಾರೆ. ಕೆಲವರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಸಾವಿರಾರು ಹೂಡಿಕೆದಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮೀರಾ, ರಮ, ರಿಯಾ, ತಿಯಾ ಎಂಬ ಹೆಸರುಗಳಲ್ಲಿ ವಿದೇಶದಲ್ಲಿ ಕುಳಿತಿರುವ ವಂಚಕರು ಈ ಗ್ಯಾಂಗ್‌ನ ಮುಖ್ಯಸ್ಥರು ಎಂದು ಆರೋಪವಿದೆ.
ಬೆಂಗಳೂರು ಸೇರಿದಂತೆ ದೇಶದಾದ್ಯಂತ ಆಫೀಸ್‌ಗಳನ್ನು ತೆರೆದು, ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಂಡು ಈ ಲೂಟಿ ನಡೆಯುತ್ತಿತ್ತು. ಈಗ ಹೂಡಿಕೆದಾರರು ಪೊಲೀಸ್ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ಸ್ಥಳೀಯ ಕಚೇರಿಗಳಲ್ಲಿ ಉದ್ಯೋಗಿಗಳು ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ.
ಈ ಘಟನೆ ಬೆಂಗಳೂರಿನಲ್ಲಿ ಹೂಡಿಕೆ ಯೋಜನೆಗಳ ಬಗ್ಗೆ ಎಚ್ಚರಿಕೆಯ ಮಣಿ ಎಳೆದಿದೆ. ಬಣ್ಣಬಣ್ಣದ ವಾಕ್ಯಗಳಿಗೆ ಮರುಳಾಗದೆ, ಕಂಪನಿಯ ನೋಂದಣಿ, SEBI ಅನುಮತಿ, ಇತರೆ ವಿವರಗಳನ್ನು ಪರಿಶೀಲಿಸಿ ಹೂಡಿಕೆ ಮಾಡುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಹಣ ಡಬಲ್ ಮಾಡುವ ಆಸೆಯನ್ನು ಹೊಂದಿರುವ ಮಧ್ಯಮ ವರ್ಗದ ಜನರೇ ಈ ಫ್ರಾಡ್ ಕಂಪನಿಗಳ ಮುಖ್ಯ ಟಾರ್ಗೆಟ್ ಆಗಿವೆ. ಹಾಗಾಗಿ ಈ ಜಾಲದಿಂದ ಅತೀ ಎಚ್ಚರದಿಂದಿರಿ.
