ಬೆಂಗಳೂರು: ಬಹುನಿರೀಕ್ಷಿತ ಎಸ್‌ಎಂ ಕೃಷ್ಣ ರಸ್ತೆ ನಾಳೆ (ಜೂನ್ 27) ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ವರೆಗೆ ಸಂಪರ್ಕ ಕಲ್ಪಿಸುವ ಈ ದಶಪಥ ರಸ್ತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಜಯಂತಿಯ ಅಂಗವಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಸುಮಾರು 631 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಹತ್ವಾಕಾಂಕ್ಷಿ ರಸ್ತೆ ಯೋಜನೆಯನ್ನು ನಿರ್ಮಿಸಿದೆ. ಒಟ್ಟು 10.7 ಕಿಲೋಮೀಟರ್ ಉದ್ದ ಹಾಗೂ 100 ಮೀಟರ್ (330 ಅಡಿ) ಅಗಲ ಹೊಂದಿರುವ ಈ ರಸ್ತೆ, ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಲಿದೆ. 10 ಲೇನ್‌ಗಳ ಈ ರಸ್ತೆಯು ಆಧುನಿಕ ನಗರ ಮೂಲಸೌಕರ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶ ಹೊಂದಿದೆ.
ಈ ಯೋಜನೆಯ ವಿಶೇಷತೆಗಳಲ್ಲಿ ಮೂರು ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ವಿಶಾಲ ರಸ್ತೆ ವಿಭಜಕ, ಆಧುನಿಕ ಸರ್ವಿಸ್ ರಸ್ತೆಗಳು ಹಾಗೂ ಪ್ರತ್ಯೇಕ ಸೈಕಲ್ ಟ್ರ್ಯಾಕ್ ವ್ಯವಸ್ಥೆ ಸೇರಿವೆ. ವಾಹನ ಚಾಲಕರು ಹಾಗೂ ಸೈಕಲ್ ಸವಾರರಿಗೆ ಸುರಕ್ಷಿತ ಮತ್ತು ವೇಗದ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ.
ಎಸ್‌ಎಂ ಕೃಷ್ಣ ರಸ್ತೆ ಆರಂಭವಾದ ಬಳಿಕ ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳಿಗೆ ಸುಲಭ ಸಂಪರ್ಕ ದೊರೆಯಲಿದೆ. ಜೊತೆಗೆ ಪೀಣ್ಯ, ಕೆಂಗೇರಿ, ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿನತ್ತ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ನಗರ ಪ್ರವೇಶಿಸುವ ವಾಹನಗಳ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ವಿಶೇಷವಾಗಿ, ಈ ರಸ್ತೆ ನೈಸ್ ರಸ್ತೆಗೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸಲಿದ್ದು, ಟೋಲ್ ಶುಲ್ಕವಿಲ್ಲದೆ ಹಾಗೂ ಬಹುತೇಕ ಸಿಗ್ನಲ್‌ರಹಿತ ಸಂಚಾರ ವ್ಯವಸ್ಥೆ ಒದಗಿಸುವುದು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಉದ್ಯೋಗ, ವ್ಯಾಪಾರ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ನಗರಕ್ಕೆ ಆಗಮಿಸುವ ಸಾವಿರಾರು ವಾಹನ ಸವಾರರಿಗೆ ಸಮಯ ಮತ್ತು ಇಂಧನ ಉಳಿತಾಯವಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಸ್‌ಎಂ ಕೃಷ್ಣ ರಸ್ತೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ನಾಳೆಯಿಂದ ಈ ರಸ್ತೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದ್ದು, ನಗರ ಸಂಚಾರ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
