ಎಸ್.ಎಲ್. ಭೈರಪ್ಪ ನಿಧನ;ಸಿದ್ದರಾಮಯ್ಯ,ಯಡಿಯೂರಪ್ಪ ಸೇರಿದಂತೆ ಗಣ್ಯರಿಂದ ಸಂತಾಪ

Untitled design (53)

ಬೆಂಗಳೂರು; (ಸೆ.24, 2025) ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕಾದಂಬರಿಕಾರ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ (94) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ವಿ. ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಣ್ಯರ ಸಂತಾಪ 

ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ:
“ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್. ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬವರ್ಗ ಮತ್ತು ಓದುಗರಿಗೆ ನನ್ನ ಸಂತಾಪಗಳು.”

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
“ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ ‘ಸರಸ್ವತಿ ಸಮ್ಮಾನ್’ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪನವರ ನಿಧನ ಆಘಾತಕಾರಿಯಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ-ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಕಾದಂಬರಿಕಾರರಾಗಿದ್ದ ಅವರನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ. ತಮ್ಮ ಅಗಾಧ ಪಾಂಡಿತ್ಯದಿಂದ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಆಳವಾಗಿ ವಿಶ್ಲೇಷಿಸಿದ ಕೃತಿಗಳಾದ ವಂಶವೃಕ್ಷ, ಪರ್ವ, ಸಾರ್ಥ, ಆವರಣ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿವೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ.”

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
“ಕನ್ನಡದ ಶ್ರೇಷ್ಠ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪನವರ ಇಹದ ‘ಯಾನ’ ಅಂತ್ಯಗೊಂಡಿದೆ. ಅವರ ಕುಟುಂಬಸ್ಥರಿಗೆ ಮತ್ತು ಸಾಹಿತ್ಯಾಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.”

ಕೇಂದ್ರ ಸಚಿವ ವಿ. ಸೋಮಣ್ಣ
“ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ, ಪದ್ಮವಿಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ವಂಶವೃಕ್ಷ, ಗೃಹಭಂಗ, ಆವರಣ, ನಾಯಿ ನೆರಳು ಮುಂತಾದ ಕಾದಂಬರಿಗಳು ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿವೆ. 2019ರಲ್ಲಿ ಮೈಸೂರು ದಸರಾವನ್ನು ಅವರಿಂದ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿತ್ತು. ಭಗವಂತ ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ.”

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಪರ್ವ ಮತ್ತು ಉತ್ತರಕಾಂಡ ಕಾದಂಬರಿಗಳ ಮೂಲಕ ಮಹಾಭಾರತ ಮತ್ತು ರಾಮಾಯಣವನ್ನು ಓದುಗರಿಗೆ ಹೊಸ ದೃಷ್ಟಿಕೋನದಲ್ಲಿ ತೋರಿಸಿದ ಭೈರಪ್ಪನವರ ನಿಧನ ಆಘಾತಕಾರಿಯಾಗಿದೆ. ಅವರ ಕಾದಂಬರಿಗಳನ್ನು ಓದಿ, ಕಥನ ಶೈಲಿ ಮತ್ತು ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಹಾಸನ ಜಿಲ್ಲೆಯಲ್ಲಿ ಹುಟ್ಟಿದ ಈ ಅಮರ ಪ್ರತಿಭೆಯ ನಿಧನ ನನಗೆ ವೈಯಕ್ತಿಕವಾಗಿ ದುಃಖ ತಂದಿದೆ. ಓಂ ಶಾಂತಿ.”

ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ

ಭೈರಪ್ಪನವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಒಬ್ಬ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಿದೆ. ಅವರ ಕಾದಂಬರಿಗಳು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿವೆ. ಅವರ ಕುಟುಂಬ, ಶಿಷ್ಯವರ್ಗ, ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಓಂ ಶಾಂತಿ.

Exit mobile version