ಬೆಂಗಳೂರು (ಜುಲೈ 3): ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಜೆಡಿಎಸ್ ನಿಯೋಗವು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ತಂಡವು ಬೆಂಗಳೂರಿನ ಶೇಷಾದ್ರಿಪುರಂ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಜೆಡಿಎಸ್ ನಾಯಕರು ನೀಡಿದ ದೂರಿನ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಬೇಕು ಎಂಬ ನಿಯಮವಿದ್ದರೂ, ಕೆಲ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎನ್ನಲಾಗಿದೆ. ಜನರ ಮನೆಗಳಿಗೆ ತೆರಳದೇ, ಬೇರೆಡೆ ಕುಳಿತುಕೊಂಡೇ ಫಾರಂಗಳನ್ನು ವಿತರಿಸುವುದು ಹಾಗೂ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗಿವೆ.
ಈ ಬಗ್ಗೆ ಶಾಸಕ ಎ. ಮಂಜು ಮಾತನಾಡಿ, ತಮ್ಮ ಕ್ಷೇತ್ರದಲ್ಲಿಯೂ ಎಸ್‌ಐಆರ್ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. “ಫಾರಂಗಳನ್ನು ಮನೆ ಮನೆಗೆ ತೆರಳಿ ನೀಡಬೇಕು. ಆದರೆ ಕೆಲವು ಕಡೆ ಅಧಿಕಾರಿಗಳು ಮಕ್ಕಳ ಕೈಯಲ್ಲಿ ಫಾರಂ ಕೊಟ್ಟು ಕಳುಹಿಸಿರುವ ಘಟನೆಗಳು ನಡೆದಿದೆ. ಈ ಬಗ್ಗೆ ತಹಶೀಲ್ದಾರ್ ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇನೆ. ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ” ಎಂದು ಎ. ಮಂಜು ತಿಳಿಸಿದರು.
ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಕೂಡ ಪ್ರಕ್ರಿಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಎಸ್‌ಐಆರ್ ಆರಂಭವಾಗಿ ಮೂರು ದಿನಗಳಾಗಿವೆ. ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಆದರೂ ಕೆಲವರು ಎಲ್ಲೋ ಕುಳಿತುಕೊಂಡೇ ಎಸ್‌ಐಆರ್ ನಡೆಸುತ್ತಿದ್ದಾರೆ. ಇದರಿಂದ ನಮಗೆ ಅನುಮಾನ ಉಂಟಾಗಿದೆ. ಇಂತಹ ನಿರ್ಲಕ್ಷ್ಯಕ್ಕೆ ಅವಕಾಶ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಎಸ್‌ಐಆರ್ ಯಾವುದೇ ಒಂದು ಮತಕ್ಷೇತ್ರದ ಸಮಸ್ಯೆಯಲ್ಲ, ಇದು ರಾಜ್ಯದಾದ್ಯಂತ ಗಂಭೀರವಾಗಿ ಗಮನಿಸಬೇಕಾದ ವಿಷಯ ಎಂದು ಹೇಳಿದರು. “ಕಳೆದ ನಾಲ್ಕು ದಿನಗಳಿಂದ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಅಧಿಕಾರಿಗಳು ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರಂ ಭರ್ತಿ ಮಾಡಬೇಕು. ಆದರೆ ನಿಯಮಗಳನ್ನು ಉಲ್ಲಂಘಿಸಲಾಗಿದೆ. ರಾಮನಗರದಲ್ಲಿ ಮೂರು ವಾರ್ಡ್‌ಗಳ 8ರಿಂದ 10 ಬೂತ್‌ಗಳಲ್ಲಿ ಅಕ್ರಮವಾಗಿ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ನಮ್ಮ ಬಿಎಲ್‌ಒ-2ಗಳಿಂದ ಬಂದಿದೆ” ಎಂದು ಆರೋಪಿಸಿದರು.
ಅವರು ಮುಂದುವರಿದು, “ಜನರು ಮನೆಯಲ್ಲಿ ಸಿಗದಿದ್ದರೆ ಅಧಿಕಾರಿಗಳು ಮೂರು ಬಾರಿ ಭೇಟಿ ನೀಡಬೇಕು. ಮೂರೂ ಬಾರಿ ಪ್ರತಿಕ್ರಿಯೆ ಸಿಗದಿದ್ದರೆ ರೆಡ್ ಸ್ಟಿಕರ್ ಹಾಕಿ ದಾಖಲೆ ಮಾಡಬೇಕು. ಅದರ ಬಳಿಕವೂ ಪ್ರತಿಕ್ರಿಯೆ ಸಿಗದಿದ್ದರೆ ಮಾತ್ರ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪ್ರಕ್ರಿಯೆ ಇರಬೇಕು. ಆದರೆ ಕೆಲ ಕಡೆ ಒಬ್ಬರಿಗೆ ಒಂದೇ ಫಾರಂ ನೀಡಬೇಕಾದ ನಿಯಮ ಉಲ್ಲಂಘಿಸಿ 10-15 ಫಾರಂಗಳನ್ನು ನೀಡಲಾಗಿದೆ. ಇದು ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಎಬ್ಬಿಸುತ್ತದೆ” ಎಂದು ಹೇಳಿದರು.
ಒಟ್ಟಾರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಜೆಡಿಎಸ್ ಆರೋಪ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗ ಈ ದೂರಿನ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.
