ಎರಡು ಬಾರಿ ಸಿಎಂ ಆಗಿದ್ದು ವರುಣಾ ಜನರ ಆಶೀರ್ವಾದದಿಂದ: ಸಿದ್ದರಾಮಯ್ಯ

Untitled design (23)

ಮೈಸೂರು ಅ, 05: ವರುಣಾ ಕ್ಷೇತ್ರದ ಜನತೆ ನೀಡಿದ ಆಶೀರ್ವಾದ, ಬೆಂಬಲ ಮತ್ತು ಶಕ್ತಿಯಿಂದಲೇ ತಾವು ರಾಜಕೀಯದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಯಿತು. ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವರುಣಾ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಿಳಾ ವಸತಿ ನಿಲಯದ ಉದ್ಘಾಟನೆ ಹಾಗೂ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಒಟ್ಟು 183 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯುತ್ತಿದೆ. ಇದರಲ್ಲಿ 40 ಕೋಟಿಗೂ ಹೆಚ್ಚು ರೂ.ಗಳ ಕಾಮಗಾರಿಗಳು ಉದ್ಘಾಟನೆಯಾಗುತ್ತಿದ್ದು, 143 ಕೋಟಿ ರೂ.ಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರುತ್ತಿದೆ ಎಂದು ತಿಳಿಸಿದರು.

ವರುಣಾ ಕ್ಷೇತ್ರ ರಚನೆಯಾದ ನಂತರ 2008ರಿಂದ ನಾಲ್ಕು ಚುನಾವಣೆಗಳು ನಡೆದಿವೆ. ಈ ಪೈಕಿ ನನ್ನನ್ನು ಕ್ಷೇತ್ರದ ಜನತೆ ಮೂರು ಬಾರಿ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರನ್ನು 2018ರಲ್ಲಿ ಒಮ್ಮೆ ಗೆಲ್ಲಿಸಿದ್ದಾರೆ. ಒಟ್ಟು ನಾಲ್ಕು ಬಾರಿ ವರುಣಾ ಕ್ಷೇತ್ರ ನನ್ನನ್ನು ಮತ್ತು ಯತೀಂದ್ರ ಅವರನ್ನು ಗೆಲ್ಲಿಸಿರುವ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. 240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದ ಜಲಾಶಯಗಳು ಸಂಪೂರ್ಣವಾಗಿ ತುಂಬಿಲ್ಲ. ತಮಿಳುನಾಡಿಗೆ 125.75 ಟಿಎಂಸಿ ನೀರು ಹೋಗಬೇಕಾಗಿದ್ದರೂ, ವಾಸ್ತವವಾಗಿ ಇದುವರೆಗೆ ಸುಮಾರು 45 ಟಿಎಂಸಿ ನೀರು ಮಾತ್ರ ಹೋಗಿದೆ. ಅಂದರೆ ಶೇ.36ರಷ್ಟು ನೀರು ಮಾತ್ರ ತಮಿಳುನಾಡಿಗೆ ಹರಿದಿದೆ. 126 ವರ್ಷಗಳಲ್ಲೇ ಈ ಬಾರಿ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ಅವರು ಹೇಳಿದರು.

ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದೆ ಹೋಗಿದ್ದರೆ ರೈತರು ಮತ್ತು ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಬಹಳಷ್ಟು ಜನರು ಗುಳೆ ಹೋಗುವುದು ತಪ್ಪಿದೆ. ಈ ಯೋಜನೆಗಳ ಮೂಲಕ ಜನರ ಕೈಗೆ ಹಣ ಸಿಕ್ಕಿದೆ, ಅನ್ನ ಸಿಕ್ಕಿದೆ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಕ್ಕಿದೆ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಹಣ ದೊರೆಯುತ್ತಿದೆ. ಬಡವರಿಗಾಗಿ ಜಾರಿಗೆ ತಂದಿರುವ ಈ ಯೋಜನೆಗಳ ಪ್ರಯೋಜನ ಎಲ್ಲಾ ಜಾತಿ, ಪಕ್ಷ ಅಥವಾ ಧರ್ಮಕ್ಕೆ ಸೇರಿದ ಜನರಿಗೂ ದೊರೆಯುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಮಗೆ ಶಕ್ತಿ ನೀಡಿದವರು ವರುಣಾ ಕ್ಷೇತ್ರದ ಜನತೆ. ತಾವು ಚುನಾವಣೆಯಲ್ಲಿ ಗೆಲ್ಲದೇ ಹೋಗಿದ್ದರೆ, ಮುಖ್ಯಮಂತ್ರಿ ಆಗದೇ ಹೋಗಿದ್ದರೆ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಕಾರ್ಯಕ್ರಮಗಳ ಹಿಂದೆ ವರುಣಾ ಕ್ಷೇತ್ರದ ಜನರೂ ಇದ್ದಾರೆ ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಹಾಗೂ ನಾನು ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯ ಮೂಲಕ ನೀಡಿದ್ದ ಭರವಸೆಗಳನ್ನು ಚಾಚೂತಪ್ಪದೆ ಜಾರಿಗೆ ತರಲು ಪ್ರಯತ್ನಿಸಿದ್ದೇನೆ. ನುಡಿದಂತೆ ನಡೆದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.

2023ರ ಮೇ 23ರಂದು ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೆ. 2026ರ ಮೇ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದರು. 2013ರಿಂದ 2018ರವರೆಗೆ ಹಾಗೂ 2023ರಿಂದ 2026ರ ಮೇ 26ರವರೆಗೆ ಸೇರಿದಂತೆ ಒಟ್ಟಾರೆ ಎಂಟು ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದೇನೆ. ಇದೀಗ ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರು ಯಾವಾಗ ಹೇಳುತ್ತಾರೋ ಆಗ ಮುಖ್ಯಮಂತ್ರಿ ಸ್ಥಾನವನ್ನು ಬಿಡುತ್ತೇನೆ ಎಂದು ನಾನು ನಾಲ್ಕೈದು ಬಾರಿ ಹೇಳಿದ್ದೆ. ಆ ಮಾತನ್ನು ಉಳಿಸಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿದಿದ್ದೇನೆ. ಅಧಿಕಾರ ಇರಲಿ ಅಥವಾ ಅಧಿಕಾರ ಇಲ್ಲದಿರಲಿ, ವರುಣಾ ಜನರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ತಾವು ಶಾಸಕನಾಗಿರಲಿ ಅಥವಾ ಇಲ್ಲದಿರಲಿ, ಜನರ ಸೇವೆ ಮಾಡುವ ಕೆಲಸವನ್ನು ಮುಂದುವರಿಸುತ್ತೇನೆ. ವರುಣಾ ಕ್ಷೇತ್ರದ ಜನರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಮೂರು ಬಾರಿ ವರುಣಾ ಕ್ಷೇತ್ರದಿಂದ ಗೆದ್ದಾಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. 2013ರಲ್ಲಿ ಮುಖ್ಯಮಂತ್ರಿಯಾದೆ, 2023ರಲ್ಲೂ ಮುಖ್ಯಮಂತ್ರಿಯಾದೆ. 2008ರಲ್ಲಿ ಗೆದ್ದಾಗ ವಿರೋಧ ಪಕ್ಷದ ನಾಯಕನಾಗಿದ್ದೆ. 2018ರಲ್ಲೂ ವಿರೋಧ ಪಕ್ಷದ ನಾಯಕನಾಗಿದ್ದೆ. ಹೀಗಾಗಿ ನಾನು ಗೆದ್ದ ಮೂರು ಸಂದರ್ಭಗಳಲ್ಲಿ ಎರಡು ಬಾರಿ ಮುಖ್ಯಮಂತ್ರಿ ಮತ್ತು ಎರಡು ಬಾರಿ ವಿರೋಧ ಪಕ್ಷದ ನಾಯಕರಾಗುವ ಅವಕಾಶ ದೊರೆತಿದೆ ಎಂದು ಹೇಳಿದರು.

ವರುಣಾ ಕ್ಷೇತ್ರದ ಜನರನ್ನು ಮತ್ತು ಮತದಾರರನ್ನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಇಂದು ನನಗೆ ಏನಾದರೂ ಶಕ್ತಿ ಇದ್ದರೆ ಅದು ವರುಣಾ ಕ್ಷೇತ್ರದ ಜನತೆ ಧಾರೆ ಎರೆದ ಶಕ್ತಿಯೇ ಕಾರಣ. ರಾಜ್ಯದಲ್ಲಿ ನಾನು ಏನಾದರೂ ಕೆಲಸ ಮಾಡಿದ್ದರೆ, ನುಡಿದಂತೆ ನಡೆದಿದ್ದರೆ ಅದಕ್ಕೆ ಜನರ ಆಶೀರ್ವಾದ ಮತ್ತು ಬೆಂಬಲವೇ ಕಾರಣ ಎಂದು ಹೇಳಿದರು.

ನಾನು ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಲಾಗಿತ್ತು. ಆ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಇದಲ್ಲದೆ ಸುಮಾರು 20ರಿಂದ 30 ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅನ್ನಭಾಗ್ಯ ಕಾರ್ಯಕ್ರಮ ಆಗಲೇ ಪ್ರಾರಂಭಿಸಲಾಗಿತ್ತು. ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾಜದಲ್ಲಿರುವ ಬಡವರು ಯಾವುದೇ ಜಾತಿಗೆ ಸೇರಿರಲಿ, ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಎಲ್ಲ ಬಡವರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಶಕ್ತಿ ನೀಡುವ ಕೆಲಸವನ್ನು ಮಾಡಲಾಗಿದೆ ಎಂದರು.

2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಅಧಿಕಾರಕ್ಕೆ ಬಂದ ಒಂದೇ ವರ್ಷದೊಳಗೆ ಐದು ಗ್ಯಾರಂಟಿ ಯೋಜನೆಗಳನ್ನೂ ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಐದು ಗ್ಯಾರಂಟಿಗಳಲ್ಲಿ ಮೊದಲನೆಯದು ಶಕ್ತಿ ಯೋಜನೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಹೇಳಿದರು.

ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದೆ. ಇದರಿಂದ ಮಹಿಳೆಯರು ತಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಮನೆಯ ಅಗತ್ಯಗಳಿಗೆ ಹಣ ಬಳಸಿಕೊಳ್ಳಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಒಂದು ವರ್ಷಕ್ಕೆ 32 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ವಿದ್ಯುತ್ ಬಳಕೆ ಮಾಡುವವರು ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ. ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗಬೇಕು, ಬಡವರ ಕೈಯಲ್ಲಿ ಹಣ ಉಳಿಯಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯ ಬಗ್ಗೆಯೂ ವಿವರಿಸಿದ ಅವರು, 2013ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಏಳು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಬಡವರು ಹೊಟ್ಟೆ ತುಂಬಾ ಊಟ ಮಾಡಬೇಕು, ಯಾರೂ ಊಟವಿಲ್ಲದೆ ಮಲುಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಏಳು ಕೆ.ಜಿ.ಯಿಂದ 10 ಕೆ.ಜಿ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು.

ಇದರ ಜೊತೆಗೆ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಉದ್ಯೋಗ ದೊರೆಯದ ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಕೆಲಸವನ್ನು ಮಾಡಲಾಗಿದೆ. ಒಟ್ಟಾರೆಯಾಗಿ ಸಮಾಜದಲ್ಲಿರುವ ಎಲ್ಲ ಬಡವರಿಗೂ ಗ್ಯಾರಂಟಿ ಯೋಜನೆಗಳ ಮೂಲಕ ಪ್ರಯೋಜನ ದೊರೆಯುವಂತೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತಾವು 40 ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿದ್ದು, ಈ ಅವಧಿಯಲ್ಲಿ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದೇನೆ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹಾಗೂ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಎಂಟು ಬಾರಿ ಗೆದ್ದಿದ್ದೇನೆ. ತಮ್ಮ ಮೇಲಿರುವ ಜನರ ಆಶೀರ್ವಾದದಿಂದಲೇ ಎಂಟು ಬಾರಿ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.

ರಾಜಕೀಯದಲ್ಲಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಜನರ ಕೆಲಸ ಮಾಡಲು ಸಾಧ್ಯವಾಗಿದ್ದರೆ, ಅದಕ್ಕೆ ಜನರು ನೀಡಿದ ಶಕ್ತಿಯೇ ಕಾರಣ. ವರುಣಾ ಕ್ಷೇತ್ರದ ನಾಲ್ಕು ಅವಧಿಗಳಲ್ಲಿ ಸುಮಾರು 5,034 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದಕ್ಕಾಗಿ ತಮಗೆ ತೃಪ್ತಿ ಮತ್ತು ಸಂತೋಷವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ನುಡಿದಂತೆ ನಡೆದಿದ್ದೇನೆ. ಬಡವರ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದೇನೆ. ಸಮಾನ ಸಮಾಜವನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ. ಈ ಪ್ರಯತ್ನವನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ಇಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ನಾನು ಜಾರಿಗೆ ತಂದಿರುವ ಎಲ್ಲ ಕೆಲಸಗಳು ಮತ್ತು ಕಾರ್ಯಕ್ರಮಗಳನ್ನು ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ಮತ್ತು ನಂಬಿಕೆ ಇದೆ. ಈಗಾಗಲೇ ಅವರು ಪಕ್ಷದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದ್ದಾರೆ. ಮುಂದೆಯೂ ಅವರು ಈ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವರುಣಾ ಕ್ಷೇತ್ರದಲ್ಲಿ 183 ಕೋಟಿ ರೂ. 64 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವುದಾಗಿ ಅವರು ಹೇಳಿದರು.

ನಾನು ಇನ್ನೂ ಒಂದೂವರೆ ವರ್ಷ ಶಾಸಕನಾಗಿ ಮುಂದುವರಿಯಲಿದ್ದು, 2028ರವರೆಗೆ ಶಾಸಕನಾಗಿರುತ್ತೇನೆ. ಅಲ್ಲಿಯವರೆಗೆ ವರುಣಾ ಕ್ಷೇತ್ರದ ಜನರ ಕೆಲಸ ಮಾಡಿಕೊಡುತ್ತೇನೆ ಮತ್ತು ಅವರ ಜೊತೆಯಲ್ಲಿರುತ್ತೇನೆ. ನನ್ನ ಮೇಲಿರುವ ಜನರ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದ ಈಗಿರುವಂತೆ ಮುಂದೆಯೂ ಇರಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಯತೀಂದ್ರ ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಮುಂದುವರಿದಿದ್ದು, ಇದೀಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರ ಮೇಲೂ ವರುಣಾ ಕ್ಷೇತ್ರದ ಜನರ ಮಾರ್ಗದರ್ಶನ, ಅಭಿಮಾನ, ಪ್ರೀತಿ ಮತ್ತು ಆಶೀರ್ವಾದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Exit mobile version