ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ 31 ವರ್ಷದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿ ಹಾಗೂ ಉದ್ಯಮಿಯ ಪುತ್ರ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿರುವ ಯುವಕ. ನಿನ್ನೆ ಬೆಳಗ್ಗೆ ಶಿವಗಂಗೆ ಬೆಟ್ಟ ಹತ್ತಲು ತೆರಳಿದ್ದ ಅವರು ಬಳಿಕ ಮನೆಗೆ ವಾಪಸ್ ಆಗದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಅದ್ವೈತ್ ಐದು ದಿನಗಳ ಹಿಂದೆ ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ರಾಯಲ್ ಎನ್‌ಫೀಲ್ಡ್ ಬೈಕ್‌ವೊಂದನ್ನು ಬಾಡಿಗೆಗೆ ಪಡೆದಿದ್ದರು. ಶಿವಗಂಗೆಗೆ ಬಂದ ಬಳಿಕ ಬೆಟ್ಟದ ಕೆಳಭಾಗದಲ್ಲಿ ಬೈಕ್ ನಿಲ್ಲಿಸಿ, ನಿನ್ನೆ ಬೆಳಗ್ಗೆ ಸುಮಾರು 7.30ರ ವೇಳೆಗೆ ಟ್ರೆಕ್ಕಿಂಗ್‌ಗಾಗಿ ಬೆಟ್ಟ ಹತ್ತಿದ್ದಾರೆ. ಬೆಟ್ಟದ ಕೆಳಭಾಗದಲ್ಲಿರುವ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅವರು ಬೆಟ್ಟದತ್ತ ತೆರಳುತ್ತಿರುವ ದೃಶ್ಯಗಳು ಸೆರೆಯಾಗಿವೆ. ಆದರೆ, ಬೆಟ್ಟ ಹತ್ತಿದ ಬಳಿಕ ಅವರು ಮರಳಿ ಕೆಳಗೆ ಬಂದಿದ್ದಾರೆಯೇ ಎಂಬುದರ ಕುರಿತು ಯಾವುದೇ ಖಚಿತ ಮಾಹಿತಿ ದೊರೆತಿಲ್ಲ.
ಶಾಂತಲಾ ಡ್ರಾಪ್ ಬಳಿ ತೀವ್ರ ಶೋಧ
ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟವು ಕಲ್ಲುಬಂಡೆಗಳು, ದಟ್ಟವಾದ ಮರಗಿಡಗಳು ಹಾಗೂ ಅತ್ಯಂತ ಕಡಿದಾದ ಪ್ರದೇಶಗಳನ್ನು ಹೊಂದಿದೆ. ಅದರಲ್ಲೂ ಬೆಟ್ಟದ ಮೇಲಿರುವ ಶಾಂತಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಅದ್ವೈತ್ ಆ ಪ್ರದೇಶದಲ್ಲಿ ಜಾರಿ ಬಿದ್ದಿರಬಹುದು ಅಥವಾ ಕಲ್ಲುಬಂಡೆಗಳ ನಡುವೆ ಸಿಲುಕಿಕೊಂಡಿರಬಹುದು ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ.
ಈ ಹಿನ್ನೆಲೆಯಲ್ಲಿ ನೆಲಮಂಗಲ ಹಾಗೂ ದಾಬಸ್‌ಪೇಟೆ ಪೊಲೀಸ್ ಠಾಣೆಗಳ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಡಿದಾದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಶೋಧ ನಡೆಸುವುದು ಕಷ್ಟವಾಗಿರುವುದರಿಂದ ಪೊಲೀಸರು ಡ್ರೋನ್ ಕ್ಯಾಮೆರಾಗಳ ನೆರವು ಪಡೆದುಕೊಂಡಿದ್ದಾರೆ. ಬೆಟ್ಟದ ವಿವಿಧ ಭಾಗಗಳಲ್ಲಿ ಡ್ರೋನ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಯುವಕನ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಪತ್ನಿಯಿಂದ ನಾಪತ್ತೆ ದೂರು
ಅದ್ವೈತ್ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳುತ್ತಿರುವುದಾಗಿ ಪತ್ನಿ ಪ್ರಾಪ್ತಿಗೆ ತಿಳಿಸಿದ್ದರು. ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಮನೆಯಿಂದ ತೆರಳಿದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ. ಹಲವು ಗಂಟೆಗಳಾದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪತ್ನಿ ಕಾಡುಗೋಡಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾಡುಗೋಡಿ ಪೊಲೀಸರಿಂದ ದಾಬಸ್‌ಪೇಟೆ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಸದ್ಯ ಶಿವಗಂಗೆ ಬೆಟ್ಟದ ಕೆಳಭಾಗದಲ್ಲಿ ಅದ್ವೈತ್ ಬಳಸುತ್ತಿದ್ದ ಬೈಕ್ ಪತ್ತೆಯಾಗಿದ್ದು, ಯುವಕನ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.
ಮೊಬೈಲ್‌ನ ಕೊನೆಯ ಲೊಕೇಶನ್, ಸಿಸಿಟಿವಿ ದೃಶ್ಯಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯುವಕ ಸುರಕ್ಷಿತವಾಗಿ ಪತ್ತೆಯಾಗಲಿ ಎಂಬ ನಿರೀಕ್ಷೆಯಲ್ಲಿ ಕುಟುಂಬಸ್ಥರು ಕಾಯುತ್ತಿದ್ದು, ಪೊಲೀಸರು ಬೆಟ್ಟದಾದ್ಯಂತ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
