ಬೆಳಗಾವಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜುಲೈ 10ರಿಂದ 12ರವರೆಗೆ ಬೆಳಗಾವಿ ನಗರದಲ್ಲಿ ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸಲು ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸೋಮವಾರ ಬೆಳಗಾವಿಗೆ ಆಗಮಿಸಿದರು. ಹೈದರಾಬಾದ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಂಘದ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಇತರ ಪ್ರಮುಖರು ಆತ್ಮೀಯವಾಗಿ ಸ್ವಾಗತಿಸಿದರು.
ಮೋಹನ್ ಭಾಗವತ್ ಅವರ ಆಗಮನದ ಹಿನ್ನೆಲೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ಉದ್ಯಮಬಾಗ ಮತ್ತು ಗೂಡ್ಸ್‌ಶೆಡ್ ರಸ್ತೆಯವರೆಗೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಪ್ರಮುಖ ಮಾರ್ಗಗಳಲ್ಲೂ ಹೆಚ್ಚುವರಿ ನಿಗಾವಹಿಸಲಾಗಿದ್ದು, ಸಭೆ ನಡೆಯುವ ಸ್ಥಳಗಳ ಸುತ್ತಮುತ್ತ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆರ್‌ಎಸ್‌ಎಸ್‌ನ ಈ ಮಹತ್ವದ ವಾರ್ಷಿಕ ಸಭೆ ಬೆಳಗಾವಿಯ ಆನಗೋಳದ ಸಂತಮೀರಾ ಶಾಲೆ, ಉದ್ಯಮಬಾಗ ಕೈಗಾರಿಕಾ ಪ್ರದೇಶದ ಫೌಂಡ್ರಿ ಕ್ಲಸ್ಟರ್ ಗೆಸ್ಟ್ ಹೌಸ್ ಹಾಗೂ ಗೂಡ್ಸ್‌ಶೆಡ್ ರಸ್ತೆಯಲ್ಲಿರುವ ಜಗನ್ನಾಥರಾವ್ ಜೋಶಿ ಸ್ಮಾರಕ ಭವನಗಳಲ್ಲಿ ಜುಲೈ 10ರಿಂದ 12ರವರೆಗೆ ನಡೆಯಲಿದೆ. ಸಭೆಯ ಪೂರ್ವ ಸಿದ್ಧತೆ ಹಾಗೂ ಚರ್ಚಾ ವಿಷಯಗಳ ಕುರಿತ ಸಮಾಲೋಚನೆಗಾಗಿ ಮೋಹನ್ ಭಾಗವತ್ ಅವರು ಜುಲೈ 7ರಿಂದಲೇ ಬೆಳಗಾವಿಯಲ್ಲಿ ತಂಗಿದ್ದು, ಜುಲೈ 14ರವರೆಗೆ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು ಸೇರಿದಂತೆ ಸಂಘದ ಸಂಘಟನಾ ವ್ಯವಸ್ಥೆಯ 11 ಕ್ಷೇತ್ರಗಳು ಮತ್ತು 46 ಪ್ರಾಂತಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಸಂಘ ಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳೂ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಘದ ಸಂಘಟನಾ ಚಟುವಟಿಕೆಗಳು, ಮುಂದಿನ ಕಾರ್ಯಯೋಜನೆಗಳು ಹಾಗೂ ವಿವಿಧ ಪ್ರಾಂತಗಳ ಕಾರ್ಯಚಟುವಟಿಕೆಗಳ ಪರಿಶೀಲನೆ ಈ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ, ಮೋಹನ್ ಭಾಗವತ್ ಅವರ ವಾಸ್ತವ್ಯ ಮತ್ತು ಸಭೆಯ ಹಿನ್ನೆಲೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಉದ್ಯಮಬಾಗ ಕೈಗಾರಿಕಾ ಪ್ರದೇಶದ ಫೌಂಡ್ರಿ ಕ್ಲಸ್ಟರ್ ಗೆಸ್ಟ್‌ಹೌಸ್, ಆನಗೋಳದ ಸಂತಮೀರಾ ಶಾಲೆ ಹಾಗೂ ಗೂಡ್ಸ್‌ಶೆಡ್ ರಸ್ತೆಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯನ್ನು ಜುಲೈ 6ರಿಂದ 14ರವರೆಗೆ ರೆಡ್ ಝೋನ್ ಹಾಗೂ ನೋ-ಫ್ಲೈ ಝೋನ್ ಎಂದು ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಕುರಿತು ಆದೇಶ ಹೊರಡಿಸಿದ್ದು, ಈ ಅವಧಿಯಲ್ಲಿ ಆ ಪ್ರದೇಶಗಳಲ್ಲಿ ಮಾನವರಹಿತ ವಾಯುವಾಹನಗಳಾದ ಡ್ರೋನ್, ಯುಎವಿ, ಯುಎಎಸ್ ಮತ್ತು ಪ್ಯಾರಾಗ್ಲೈಡರ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಭೆಗೆ ದೇಶದ ವಿವಿಧ ಭಾಗಗಳಿಂದ ಪ್ರಮುಖರು ಆಗಮಿಸುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
