ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಇಂದು ದರ್ಶನ್ ಖುದ್ದು ಹಾಜರಾತಿ ಬಗ್ಗೆ ಆದೇಶ ಪ್ರಕಟ

Untitled design 2026 08 17T080419.646

ಬೆಂಗಳೂರು, ಆಗಸ್ಟ್ 17: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೇಷನ್ಸ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ. ನಟ ದರ್ಶನ್ ಸಲ್ಲಿಸಿರುವ ಖುದ್ದು ಹಾಜರಾತಿ ಸಂಬಂಧಿತ ಅರ್ಜಿ ಹಾಗೂ ಆರೋಪಿ ಪ್ರದೋಷ್‌ನ ಮಾಫಿ ಸಾಕ್ಷಿ ಪ್ರಕ್ರಿಯೆ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ಎರಡೂ ಪಕ್ಷಗಳ ವಾದ–ಪ್ರತಿವಾದಗಳನ್ನು ಆಲಿಸಿದ್ದ ಸೇಷನ್ಸ್ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು ತಮ್ಮ ಆದೇಶವನ್ನು ಪ್ರಕಟಿಸಲಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯ ದಿಕ್ಕನ್ನು ಈ ಆದೇಶ ನಿರ್ಧರಿಸಲಿದೆ ಎಂಬ ಕಾರಣಕ್ಕೆ ನ್ಯಾಯಾಲಯದ ವಿಚಾರಣೆ ಮೇಲೆ ಎಲ್ಲರ ಗಮನ ನೆಟ್ಟಿದೆ.

ದರ್ಶನ್ ಪರ ವಕೀಲರ ಪ್ರಮುಖ ವಾದ

ದರ್ಶನ್ ಪರ ವಕೀಲ ಹಷ್ಮಾತ್ ಪಾಷಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ಟ್ರಯಲ್ ಆರಂಭವಾಗಿ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ನಡೆಯುವ ಮೊದಲು ದರ್ಶನ್‌ನಿಂದ ವೈಯಕ್ತಿಕವಾಗಿ ಮಾಹಿತಿ ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಅವರ ವಾದದ ಪ್ರಕಾರ, ಆರೋಪಿಯ ಹೇಳಿಕೆ ಮತ್ತು ವಿಚಾರಣೆಗೆ ಸಂಬಂಧಿಸಿದ ಕೆಲವು ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕಿದ್ದು, ಸಾಕ್ಷಿ ವಿಚಾರಣೆಗೂ ಮುನ್ನ ದರ್ಶನ್ ಖುದ್ದು ಹಾಜರಾಗುವ ಅವಕಾಶ ನ್ಯಾಯಸಮ್ಮತ ಪ್ರಕ್ರಿಯೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಪ್ರದೋಷ್‌ನ ಮಾಫಿ ಸಾಕ್ಷಿ ಕುರಿತು ತೀರ್ಮಾನ

ಇನ್ನೊಂದೆಡೆ, ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯೂ ಇಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಪ್ರದೋಷ್‌ನ ಹೇಳಿಕೆಯನ್ನು ಯಾವ ದಿನಾಂಕದಂದು ದಾಖಲಿಸಬೇಕು ಎಂಬುದರ ಬಗ್ಗೆ ಸೇಷನ್ಸ್ ಕೋರ್ಟ್ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಈ ವಿಚಾರದಲ್ಲಿ ಈಗಾಗಲೇ ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಮಾಫಿ ಸಾಕ್ಷಿ ಪರಿಗಣಿಸುವ ಹಂತದಲ್ಲಿ ಆರೋಪಿಗಳ ಆಕ್ಷೇಪಣೆ ಆಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೊತೆಗೆ, ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ಆರೋಪಿಗಳ ವಾದವನ್ನು ಕೇಳಬೇಕು ಎಂಬ ನಿಯಮವೂ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೈಕೋರ್ಟ್ ಆದೇಶದಂತೆ, ಮೊದಲು ಮಾಫಿ ಸಾಕ್ಷಿಯನ್ನು ಪರಿಗಣಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದರ ನಂತರವೇ ಆರೋಪಿಗಳು ಆ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಅವಕಾಶ ಪಡೆಯಬಹುದು ಎಂದು ತಿಳಿಸಲಾಗಿದೆ.

Exit mobile version