ಸರ್ಕಾರಿ ಬಸ್ಸುಗಳಲ್ಲಿ ತಂಬಾಕು ಜಾಹೀರಾತು ಬ್ಯಾನ್: ಸಚಿವ ರಾಮಲಿಂಗಾರೆಡ್ಡಿ ಆದೇಶ

Untitled design 2026 01 30T210004.861

ಬೆಂಗಳೂರು: ಎಲ್ಲಾ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ತಂಬಾಕು ಸಂಬಂಧಿತ ಪೋಸ್ಟರ್‌ಗಳನ್ನು ಈ ಕೂಡಲೇ ನಿಷೇಧಿಸುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಸರ್ಕಾರಿ ಬಸ್ಸುಗಳ ಮೇಲೆ ರಾರಾಜಿಸುತ್ತಿದ್ದ ತಂಬಾಕು ಉತ್ಪನ್ನಗಳ ಜಾಹೀರಾತುಗಳಿಗೆ ಸಚಿವರು ಪೂರ್ಣವಿರಾಮ ಇಟ್ಟಿದ್ದಾರೆ.

ಆಕ್ರೋಶಕ್ಕೆ ಮಣಿದ ಸರ್ಕಾರ

ಕಳೆದ ಕೆಲವು ತಿಂಗಳಿಂದ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳ ಹಿಂದೆ ಮತ್ತುಬಸ್‌ನ ಸುತ್ತಾ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳ ಬೃಹತ್ ಜಾಹೀರಾತುಗಳು ಕಂಡುಬರುತ್ತಿದ್ದವು. ಸರ್ಕಾರವೇ ಒಂದು ಕಡೆ ತಂಬಾಕು ಮುಕ್ತ ಸಮಾಜದ ಬಗ್ಗೆ ಮಾತನಾಡುತ್ತಾ, ಮತ್ತೊಂದೆಡೆ ತನ್ನದೇ ಬಸ್ಸುಗಳಲ್ಲಿ ಇಂತಹ ಪ್ರಚೋದನಾಕಾರಿ ಜಾಹೀರಾತುಗಳಿಗೆ ಅವಕಾಶ ನೀಡುತ್ತಿರುವುದು ಸರಿಯೇ ? ಎಂದು ಸಾರ್ವಜನಿಕರು ಹಾಗೂ ಆರೋಗ್ಯ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ರೋಶಕ್ಕೆ ಸ್ಪಂದಿಸಿರುವ ಸಚಿವರು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಸಚಿವರ ಈ ಆದೇಶವು ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಮತ್ತು ಕೆಕೆಆರ್‌ಟಿಸಿ (KKRTC) ಎಂಬ ನಾಲ್ಕೂ ನಿಗಮಗಳ ಬಸ್ಸುಗಳಿಗೆ ಅನ್ವಯವಾಗಲಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ. ಆದಾಯದ ಮೂಲಕ್ಕಿಂತಲೂ ಜನರ ಆರೋಗ್ಯ ಮುಖ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ನಿಯಮ ಮೀರಿ ಜಾಹೀರಾತು ಪ್ರದರ್ಶಿಸಿದರೆ ಅಥವಾ ಹೊಸದಾಗಿ ಅಂಟಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಚಿವರ ಸೂಚನೆ ಹೊರಬಿದ್ದ ಬೆನ್ನಲ್ಲೇ ಸಾರಿಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಡಿಪೋಗಳಲ್ಲಿರುವ ಬಸ್ಸುಗಳ ಮೇಲಿರುವ ತಂಬಾಕು ಉತ್ಪನ್ನಗಳ ಪೋಸ್ಟರ್‌ಗಳನ್ನು ಹರಿದು ಹಾಕಲಾಗುತ್ತಿದೆ. ಇನ್ನು ಮುಂದೆ ಯಾವುದೇ ಖಾಸಗಿ ಏಜೆನ್ಸಿಗಳೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಳ್ಳುವಾಗ ತಂಬಾಕು ಉತ್ಪನ್ನಗಳನ್ನು ಹೊರಗಿಡುವಂತೆ ಸೂಚಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Exit mobile version