ರಾಯರ 355ನೇ ಆರಾಧನಾ ಮಹೋತ್ಸವ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

Untitled design 2026 08 30T093556.149

ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ನಡೆಯುತ್ತಿದೆ. ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 355 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಆರಾಧನಾ ಮಹೋತ್ಸವದ ಪ್ರಮುಖ ಘಟ್ಟವಾದ ಮಧ್ಯಾರಾಧನೆ ಇಂದು ವಿಶೇಷ ಪೂಜೆ, ಅಭಿಷೇಕ ಹಾಗೂ ರಥೋತ್ಸವಗಳೊಂದಿಗೆ ನೆರವೇರುತ್ತಿದೆ.

ಮಧ್ಯಾರಾಧನೆಯ ದಿನ ಗುರುರಾಯರ ದರ್ಶನ ಹಾಗೂ ಆರಾಧನೆಯಿಂದ ವಿಶೇಷ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಮಠದ ಆವರಣದಲ್ಲಿ ಭಕ್ತರಿಗಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಧಾರ್ಮಿಕ ವಾತಾವರಣ ಮತ್ತಷ್ಟು ಕಳೆಗಟ್ಟಿದೆ.

ಮಹಾಪಂಚಾಮೃತ ಅಭಿಷೇಕ

ಮಧ್ಯಾರಾಧನೆಯ ಅಂಗವಾಗಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಮಹಾಪಂಚಾಮೃತ ಅಭಿಷೇಕ ನೆರವೇರಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ನಡೆಯುವ ಪಂಚಾಮೃತ ಅಭಿಷೇಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಪದಾರ್ಥಗಳನ್ನು ಬಳಸಿ ಈ ವಿಶೇಷ ಅಭಿಷೇಕವನ್ನು ನೆರವೇರಿಸಲಾಗುತ್ತದೆ.

ಹಾಲು, ಮೊಸರು, ತುಪ್ಪ, ಜೇನು, ವಿವಿಧ ಹಣ್ಣುಗಳು, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಹಲವು ಪದಾರ್ಥಗಳನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ. ಶ್ರೀಗಳು ವೃಂದಾವನದ ನಾಲ್ಕು ದಿಕ್ಕುಗಳಿಗೂ ವಿಧಿವಿಧಾನಗಳೊಂದಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಭಿಷೇಕದ ಬಳಿಕ ರಾಯರ ವೃಂದಾವನಕ್ಕೆ ಚಿನ್ನದ ಕವಚ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.C XX

ಚಿನ್ನದ ರಥೋತ್ಸವ, ತೆಪ್ಪೋತ್ಸವ

ಮಧ್ಯಾರಾಧನೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ನಡೆಯಲಿದೆ. ವಿಶೇಷವಾಗಿ ಅಲಂಕರಿಸಲಾದ ರಥದಲ್ಲಿ ಗುರುರಾಯರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥೋತ್ಸವ ನಡೆಸಲಾಗುತ್ತದೆ.

ಗುರು ರಾಘವೇಂದ್ರ ಸ್ವಾಮಿಗಳು ಇಂದಿಗೂ ವೃಂದಾವನದಲ್ಲಿ ತಮ್ಮ ಯೋಗಶಕ್ತಿಯಿಂದ ಸಶರೀರರಾಗಿ ನೆಲೆಸಿದ್ದಾರೆ ಎಂಬುದು ಭಕ್ತರ ನಂಬಿಕೆ. ಮಧ್ಯಾರಾಧನೆಯ ದಿನ ರಾಯರು ವಿಶೇಷವಾಗಿ ಭಕ್ತರನ್ನು ಅನುಗ್ರಹಿಸುತ್ತಾರೆ ಎಂಬ ಪ್ರತೀತಿಯೂ ಇದೆ. ಈ ಕಾರಣದಿಂದಲೇ ಆರಾಧನಾ ಮಹೋತ್ಸವದಲ್ಲಿ ಮಧ್ಯಾರಾಧನೆಗೆ ವಿಶೇಷ ಮಹತ್ವ ನೀಡಲಾಗಿದೆ.

ಇದೇ ವೇಳೆ ರಾತ್ರಿ ಮಠದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ದೇಶದ ವಿವಿಧೆಡೆಯಿಂದ ಆಗಮಿಸಿರುವ ಭಕ್ತರು ಹಾಗೂ ಗಣ್ಯರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುರಾಯರ ದರ್ಶನ ಪಡೆಯಲಿದ್ದಾರೆ.

ಆಗಸ್ಟ್ 31ರಂದು ಮಹಾರಥೋತ್ಸವ

ಮಧ್ಯಾರಾಧನೆ ಬಳಿಕ ಆಗಸ್ಟ್ 31ರಂದು ಉತ್ತರಾರಾಧನೆ ನಡೆಯಲಿದೆ. ಉತ್ತರಾರಾಧನೆಯ ಅಂಗವಾಗಿ ಮಂತ್ರಾಲಯದ ರಾಜಬೀದಿಯಲ್ಲಿ ಭವ್ಯ ಮಹಾರಥೋತ್ಸವ ಆಯೋಜಿಸಲಾಗಿದೆ. ಇದರೊಂದಿಗೆ ರಾಯರ ಆರಾಧನಾ ಮಹೋತ್ಸವದ ಪ್ರಮುಖ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಆದರೆ, ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿದ್ದು, ಸೆಪ್ಟೆಂಬರ್ 2ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

Exit mobile version