ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ ಇಟ್ಟ ‘ರಾಡಿಸನ್’

Your paragraph text (87)

ಮಂಜಿನ ನಗರಿ, ಕಾಫಿ ನಾಡು ಕೊಡಗಿಗೆ ಪ್ರತಿಷ್ಠಿತ ‘ರಾಡಿಸನ್ ಹೋಟೆಲ್ ಗ್ರೂಪ್’ ಲಗ್ಗೆ ಇಟ್ಟಿದೆ. ‘ರಾಡಿಸನ್ ಇಂಡಿವಿಜುವಲ್ಸ್ ಪ್ರೀಮಿಯರ್’ ಬ್ರಾಂಡ್‌ನ ಅಡಿಯಲ್ಲಿ ‘ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್ ಸ್ಪಾ’ ಎಂಬ ಅತ್ಯಂತ ಸುಂದರ ಹಾಗೂ ಐಷಾರಾಮಿ ರೆಸಾರ್ಟ್ ಅನ್ನು ಮಡಿಕೇರಿಯಲ್ಲಿ ಆರಂಭಿಸಿದೆ.

ಭಾರತದಲ್ಲಿ ತನ್ನ ಜಾಲವನ್ನು ವಿಸ್ತರಿಸುತ್ತಿರುವ ರಾಡಿಸನ್ ಹೋಟೆಲ್ ಗ್ರೂಪ್, ಪ್ರವಾಸಿಗರ ಹಾಟ್‌ಸ್ಪಾಟ್ ಆಗಿರುವ ಕೊಡಗಿನಲ್ಲಿ ಈ ಹೊಸ ರೆಸಾರ್ಟ್ ತೆರೆಯುವ ಮೂಲಕ ಕರ್ನಾಟಕದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

 

ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿರುವ ಈ ರೆಸಾರ್ಟ್, ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವ ಪ್ರವಾಸಿಗರಿಗೆ ಹೇಳಿಮಾಡಿಸಿದಂತಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು. ಕಣ್ಣೂರು (100 ಕಿ.ಮೀ), ಮೈಸೂರು (101 ಕಿ.ಮೀ) ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (261 ಕಿ.ಮೀ) ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಅಷ್ಟೇ ಅಲ್ಲದೆ, ಮಡಿಕೇರಿ ಕೋಟೆ, ಅಬ್ಬೆ ಫಾಲ್ಸ್, ಕೋಟೆಬೆಟ್ಟ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂತಹ ಪ್ರವಾಸಿ ತಾಣಗಳು ಇಲ್ಲಿಗೆ ಹತ್ತಿರದಲ್ಲಿವೆ.

ಈ ರೆಸಾರ್ಟ್‌ನಲ್ಲಿ ಒಟ್ಟು 78 ಅತ್ಯಾಧುನಿಕ ಕೊಠಡಿಗಳಿವೆ. ಪನೋರಮಾ ರೂಮ್ಸ್, ಕೋರ್ಟ್‌ಯಾರ್ಡ್ ರೂಮ್ಸ್ ಹಾಗೂ ಪೀಬೆರಿ ಸೂಟ್ಸ್ ಎಂಬ 3 ವಿಭಾಗಗಳಲ್ಲಿ ರೂಮ್‌ಗಳು ಲಭ್ಯವಿವೆ. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಖಾಸಗಿ ಬಾಲ್ಕನಿ, ಗಾರ್ಡನ್ ವೀಕ್ಷಣೆ ಹಾಗೂ ಸಮಕಾಲೀನ ಒಳಾಂಗಣ ವಿನ್ಯಾಸವನ್ನು ಇವು ಹೊಂದಿವೆ.

ರೆಸಾರ್ಟ್‌ನಲ್ಲಿ ಅತಿಥಿಗಳಿಗಾಗಿ ಎರಡು ವಿಶೇಷ ಡೈನಿಂಗ್ ಆಯ್ಕೆಗಳಿವೆ. ಎಲಿಫೆಂಟ್ಸ್ & ಕಾಫಿಯು ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ಕೊಡಗಿನ ಸ್ಥಳೀಯ ಖಾದ್ಯಗಳ ಜೊತೆಗೆ ಬಾರ್ಬೆಕ್ಯೂ ಮತ್ತು ಓಪನ್‌ ಏರ್‌ ಡೈನಿಂಗ್‌ ವ್ಯವಸ್ಥೆ ಇದೆ.

ಬಂದೂಕ್ ಬಾರ್ ಕೊಡಗಿನ ಸಾಂಪ್ರದಾಯಿಕ ಸಂಸ್ಕೃತಿಯಿಂದ ಪ್ರೇರಿತವಾದ ಬಾರ್‌ ಆಗಿದ್ದು, ಇಲ್ಲಿ ಅತ್ಯುತ್ತಮ ದರ್ಜೆಯ ಪಾನೀಯಗಳು ಮತ್ತು ಕಾಕ್‌ಟೇಲ್‌ಗಳು ಲಭ್ಯವಿದೆ.

ಮದುವೆ, ಸಮಾರಂಭ ಹಾಗೂ ವಿಶ್ರಾಂತಿಗೆ ಹೇಳಿಮಾಡಿಸಿದ ಜಾಗ

ಇಲ್ಲಿನ 139 ಚದರ ಮೀಟರ್ ವಿಸ್ತೀರ್ಣದ ‘ಚೆರ್ರಿ ಹಾಲ್’ನಲ್ಲಿ ಮದುವೆ, ಕಾರ್ಪೊರೇಟ್ ಮೀಟಿಂಗ್ ಹಾಗೂ ಇತರ ಸಮಾರಂಭಗಳನ್ನು ಆಯೋಜಿಸಬಹುದು. 200ಕ್ಕೂ ಹೆಚ್ಚು ಅತಿಥಿಗಳು ಒಂದೆಡೆ ಸೇರಲು ಸ್ಥಳಾವಕಾಶವಿದ್ದು, ಜೊತೆಗೆ ದಣಿವಾರಿಸಿಕೊಳ್ಳಲು ಸ್ಪಾ, ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಸೌಲಭ್ಯವೂ ಇದೆ.

ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ರಾಡಿಸನ್ ಹೋಟೆಲ್ ಗ್ರೂಪ್‌ನ (ದಕ್ಷಿಣ ಏಷ್ಯಾ) ಎಂಡಿ ನಿಖಿಲ್ ಶರ್ಮಾ, “ಪ್ರವಾಸಿಗರ ನೆಚ್ಚಿನ ತಾಣವಾದ ಕೊಡಗಿಗೆ ರಾಡಿಸನ್ ಗ್ರೂಪ್ ಕಾಲಿಡುತ್ತಿರುವುದು ನಮ್ಮ ಮಾರುಕಟ್ಟೆ ವಿಸ್ತರಣೆಯ ಪ್ರಮುಖ ಹೆಜ್ಜೆಯಾಗಿದೆ. ಸ್ಥಳೀಯ ಸಂಸ್ಕೃತಿ ಮತ್ತು ಜಾಗತಿಕ ಗುಣಮಟ್ಟದ ಆತಿಥ್ಯವನ್ನು ನಾವು ಒಟ್ಟಿಗೆ ನೀಡಲಿದ್ದೇವೆ,” ಎಂದಿದ್ದಾರೆ.

ಎಸ್‌ಎಲ್‌ಎನ್‌ ಹೋಟೆಲ್ಸ್‌ನ ಪಾಲುದಾರರಾದ ನಾರಾಯಣ್ ಮತ್ತು ವಿಶಾಲಾಕ್ಷಿ ವಿಶ್ವನಾಥನ್, “ರಾಡಿಸನ್ ಜೊತೆಗಿನ ಪಾಲುದಾರಿಕೆಯೊಂದಿಗೆ ಕೂರ್ಗ್‌ನ ನೈಸರ್ಗಿಕ ಸೌಂದರ್ಯ ಮತ್ತು ಅತ್ಯುತ್ತಮ ಆತಿಥ್ಯವನ್ನು ಅತಿಥಿಗಳಿಗೆ ಒದಗಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ 200ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಹೊಂದಿರುವ ರಾಡಿಸನ್ ಹೋಟೆಲ್ ಗ್ರೂಪ್, ಇದೀಗ ಕರ್ನಾಟಕದ ಕೊಡಗಿನಲ್ಲಿ ತನ್ನ ಹೊಸ ಹೆಜ್ಜೆ ಇಡುವ ಮೂಲಕ ಪ್ರವಾಸೋದ್ಯಮಕ್ಕೆ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.

Exit mobile version