ರಸ್ತೆಯಲ್ಲಿ ನಮಾಜ್‌ಗೆ ಅನುಮತಿ ಕಡ್ಡಾಯ: ಪ್ರಿಯಾಂಕ್ ಖರ್ಗೆ

Untitled design 2025 10 20t233407.120

ಬೆಂಗಳೂರು: ರಸ್ತೆಯಲ್ಲಿ ನಮಾಜ್ ಮಾಡಲು ಕೂಡ ಅನುಮತಿ ಕಡ್ಡಾಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಸ್ತೆಯಲ್ಲಿ ಪೂರ್ವಾನುಮತಿ ಇಲ್ಲದೇ ನಮಾಜ್ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಪತ್ರ ಬರೆದಿದ್ದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ರಸ್ತೆಯಲ್ಲಿ ಪ್ರಾರ್ಥನೆ ಮಾಡಲು ಅರ್ಜಿ ಹಾಕಿ ಅನುಮತಿ ಪಡೆದುಕೊಳ್ಳಬೇಕು ಎಂದರು.

ಯತ್ನಾಳ್ ಅವರು ಇಂಗ್ಲಿಷ್‌ನಲ್ಲಿ ಪತ್ರ ಬರೆದಿರುವುದನ್ನು ಟೀಕಿಸಿದ ಖರ್ಗೆ, ಯಾರಿಗೆ ಸಂದೇಶ ಕೊಡಲು ಇಂಗ್ಲಿಷ್‌ನಲ್ಲಿ ಪತ್ರ ಬರೆದಿದ್ದಾರೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗೆ ಗೊತ್ತಾಗಲಿ ಎಂದೋ, ಅಮಿತ್ ಶಾ ಅವರಿಗೆ ಗೊತ್ತಾಗಲಿ ಎಂದೋ ಅಥವಾ ಬೇರೆ ಯಾರಿಗೆ ಗೊತ್ತಾಗಲಿ ಎಂದು ಬರೆದಿದ್ದಾರೊ ಗೊತ್ತಿಲ್ಲ ಎಂದು ಹೇಳಿದರು.

ನಮ್ಮದು ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಕಾನೂನು ತಿದ್ದುಪಡಿ ತಂದಿದೆ. ಆದರೆ ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ತಿಳಿಸಿದರು.

ಪಥ ಸಂಚಲನ ಕುರಿತು ಮಾತನಾಡಿದ ಖರ್ಗೆ, ಪಥ ಸಂಚಲನ ನಡೆಸಲು ಹೈಕೋರ್ಟ್ ಆದೇಶದಂತೆ ಆರ್‌ಎಸ್‌ಎಸ್ ಹೊಸದಾಗಿ ಅರ್ಜಿ ಸಲ್ಲಿಸಲಿ. ಅನುಮತಿ ನೀಡುವ ಕುರಿತು ಜಿಲ್ಲಾಡಳಿತ ತೀರ್ಮಾನ ಮಾಡಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿ, ಸರ್ಕಾರ ರಾಷ್ಟ್ರೀಯ ಸೇವಾ ಸಂಘ (ಆರ್‌ಎಸ್‌ಎಸ್) ನಿಷೇಧ ಮಾಡಿಲ್ಲ. ಶಾಲಾ-ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್‌ಎಸ್‌ಎಸ್ ಅಂತಾ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ ಅಷ್ಟೇ. ಅವರು ಮಾಡಬಹುದು, ನಾವು ಮಾಡಬಾರದೇ? ಎಂದು ಪ್ರಶ್ನಿಸಿದರು. 2013 ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಶಾಲಾ-ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Exit mobile version