ಬಿಡದಿ ಟೌನ್‌ಶಿಪ್ ವಿವಾದ ಇದೀಗ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬೈರಮಂಗಲದಲ್ಲಿ ಬಹಿರಂಗ ಚರ್ಚೆ ನಡೆಯುತ್ತದೆಯೇ ಅಥವಾ ಈ ವಿಚಾರ ವಿಧಾನಸೌಧದ ಅಂಗಳಕ್ಕೆ ಸೀಮಿತವಾಗುತ್ತದೆಯೇ ಎಂಬ ಪ್ರಶ್ನೆ ರಾಜ್ಯದ ಗಮನ ಸೆಳೆದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ಯೋಜನೆಯಿಂದ ಭಾದಿತರಾದ ರೈತರ ಪರವಾಗಿ ಬೈರಮಂಗಲದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು, ಶನಿವಾರ ಮಧ್ಯಾಹ್ನದವರೆಗೆ ಸ್ಥಳದಲ್ಲೇ ಕಾಯುವುದಾಗಿ ಘೋಷಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರ ಅಧಿಕೃತ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಗಮನಿಸಿದರೆ ಅವರು ಬೈರಮಂಗಲಕ್ಕೆ ತೆರಳುವ ಸಾಧ್ಯತೆಗಳು ಅತ್ಯಂತ ಕಡಿಮೆ ಎನ್ನಲಾಗಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಾವು ಯಾವುದೇ ರೀತಿಯ ಗಲಾಟೆ ಅಥವಾ ಸಂಘರ್ಷಕ್ಕೆ ಮುಂದಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದೇವೆ ಅಷ್ಟೇ. ಮುಖ್ಯಮಂತ್ರಿ ಅವರೊಂದಿಗೆ ಯಾವುದೇ ಪತ್ರ ಸಮರ ನಡೆಸುತ್ತಿಲ್ಲ. ಅವರು ವಿಧಾನಸೌಧಕ್ಕೆ ಬರುವಂತೆ ಪತ್ರ ಬರೆದಿದ್ದರು. ಆದರೆ ರೈತರ ಸಮಸ್ಯೆಗೆ ಸಂಬಂಧಿಸಿದ ಚರ್ಚೆ ವಿಧಾನಸೌಧದಲ್ಲಿ ಅಲ್ಲ, ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮ್ಮುಖದಲ್ಲೇ ನಡೆಯಬೇಕು ಎಂದು ನಾನು ಉತ್ತರಿಸಿದ್ದೇನೆ. ಜೂನ್ 27ರಂದು ಬೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಈಗಾಗಲೇ ತಿಳಿಸಿದ್ದೇನೆ. ಅದರಂತೆ ನಾನು ಹೋಗುತ್ತಿದ್ದೇನೆ. ಅವರು ಬಂದರೆ ಚರ್ಚೆ ನಡೆಸುತ್ತೇನೆ. ಆದರೆ ನನ್ನ ಪತ್ರಕ್ಕೆ ಇನ್ನೂ ಯಾವುದೇ ಉತ್ತರ ಬಂದಿಲ್ಲ,” ಎಂದು ಹೇಳಿದರು.
ಈ ಯೋಜನೆಯಲ್ಲಿ ತಮ್ಮ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ರೈತರು ಸ್ವಇಚ್ಛೆಯಿಂದ ಭೂಮಿ ನೀಡಲು ಮುಂದಾದರೆ ತಮ್ಮಿಂದ ಯಾವುದೇ ವಿರೋಧವಿಲ್ಲ ಎಂದರು. “ನಾನು ನಿಗದಿತ ಸಮಯಕ್ಕೆ ಬೈರಮಂಗಲಕ್ಕೆ ತೆರಳುತ್ತಿದ್ದೇನೆ. ಕೆಲವರು ಭೂಮಿ ನೀಡಲು ಸಿದ್ಧರಾಗಿದ್ದಾರೆ ಎನ್ನುವುದು ನಿಜ. ಆದರೆ ಬಹುಪಾಲು ರೈತರು ಭೂಮಿ ನೀಡಲು ಒಪ್ಪುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ರೈತರನ್ನು ಒತ್ತಾಯಿಸುವ ಅಥವಾ ಬೆದರಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ,” ಎಂದರು.
ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯ ಅನುಭವವನ್ನು ನೆನಪಿಸಿಕೊಂಡ ಅವರು, ಇದೇ ಬಿಡದಿ ಉಪನಗರ ಯೋಜನೆ ವಿಚಾರ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿ ಅವರ ಸಮ್ಮುಖದಲ್ಲೇ ಸಭೆ ನಡೆಸಿದ್ದೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ನಾಯಕರು ಯೋಜನೆ ಜಾರಿಗೆ ಉತ್ಸುಕರಾಗಿರುವುದು ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.
“ಸರ್ಕಾರದ ಬಳಿ ಎಲ್ಲ ಮಾಹಿತಿಯೂ ಇದೆ. ಕೆಲ ರೈತರು ಭೂಮಿ ನೀಡಲು ಒಪ್ಪಿರಬಹುದು. ಆದರೆ ಹೆಚ್ಚಿನ ಸಂಖ್ಯೆಯ ರೈತರು ತಮ್ಮ ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರ ಮೇಲೂ ಒಂದೇ ರೀತಿಯ ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ. ರೈತರ ಅಭಿಪ್ರಾಯ ಮತ್ತು ಹಕ್ಕುಗಳಿಗೆ ಸರ್ಕಾರ ಗೌರವ ನೀಡಬೇಕು,” ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸಿಎಂಗೆ ದಿನಪೂರ್ತಿ ನಿಗದಿತ ಕಾರ್ಯಕ್ರಮಗಳು
ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶನಿವಾರ ದಿನಪೂರ್ತಿ ಹಲವು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ. ಬೆಳಿಗ್ಗೆ 9 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಯಲಹಂಕದ ಹೊಯ್ಸಳ ಕ್ರೀಡಾಂಗಣ ಹಾಗೂ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಕೆಂಪೇಗೌಡರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.
ಎಸ್.ಎಂ. ಕೃಷ್ಣ ರಸ್ತೆ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು
ಬೆಳಿಗ್ಗೆ 11 ಗಂಟೆಯಿಂದ 11.45ರವರೆಗೆ ಶ್ರೀ ಎಸ್.ಎಂ. ಕೃಷ್ಣ ದಶಪಥ ರಸ್ತೆಯ ಲೋಕಾರ್ಪಣೆ, ಕೆಂಪೇಗೌಡರ ಸ್ಮಾರಕ ಅನಾವರಣ, ಹಸಿರು ಅಭಿಯಾನ ಉದ್ಘಾಟನೆ ಹಾಗೂ ಏಳು ಪುರಜ್ಯೋತಿಗಳ ಸ್ವೀಕಾರ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದರ ಜೊತೆಗೆ ಬೆಳಿಗ್ಗೆ 11 ಗಂಟೆಗೆ ಭಾರತ್ ಜೋಡೋ ಭವನದಲ್ಲಿ ನಡೆಯಲಿರುವ INTUC ರಾಷ್ಟ್ರೀಯ ಮಹಾಸಭೆ ಮತ್ತು ರಾಜ್ಯ ಅಧಿವೇಶನದಲ್ಲೂ ಮುಖ್ಯಮಂತ್ರಿಯವರು ಪಾಲ್ಗೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ.
ಸಂಜೆಯಲ್ಲೂ ಬ್ಯುಸಿ ವೇಳಾಪಟ್ಟಿ
ಸಂಜೆ 5.15ಕ್ಕೆ ಉಪರಾಷ್ಟ್ರಪತಿಯನ್ನು ಸ್ವಾಗತಿಸುವ ಕಾರ್ಯಕ್ರಮವಿದ್ದು, ಸಂಜೆ 7 ಗಂಟೆಗೆ ಇಂಡಿಯಾ ಟುಡೇ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರೊಂದಿಗೆ ಭೇಟಿ ಕೂಡ ಮುಖ್ಯಮಂತ್ರಿಯವರ ದಿನಚರಿಯಲ್ಲಿ ಸೇರಿದೆ.
ಬೈರಮಂಗಲ ಚರ್ಚೆಗೆ ಹಾಜರಾಗುವ ಸಾಧ್ಯತೆ ಕಡಿಮೆ
ಮುಖ್ಯಮಂತ್ರಿಯವರ ದಿನಪೂರ್ತಿ ನಿಗದಿಯಾಗಿರುವ ಅಧಿಕೃತ ಕಾರ್ಯಕ್ರಮಗಳನ್ನು ಗಮನಿಸಿದರೆ, ಬೈರಮಂಗಲದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ನಡೆಯಬೇಕಿದ್ದ ಬಹಿರಂಗ ಚರ್ಚೆಗೆ ಅವರು ಹಾಜರಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಹೀಗಾಗಿ ಕುಮಾರಸ್ವಾಮಿ ನೀಡಿರುವ ಆಹ್ವಾನಕ್ಕೆ ಮುಖ್ಯಮಂತ್ರಿ ಸ್ಪಂದಿಸುತ್ತಾರೆಯೇ ಅಥವಾ ಈ ರಾಜಕೀಯ ವಾಕ್ಸಮರ ಮತ್ತೊಂದು ಹಂತಕ್ಕೆ ಸಾಗುತ್ತದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ.
