ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತಲೆದೂರಿರುವ ಇಂಧನ ಅಭಾವವನ್ನು ಎದುರಿಸಲು ಭಾರತ ಸನ್ನದ್ಧವಾಗಿದೆ. ಕೋವಿಡ್ ಮಹಾಮಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಒಗ್ಗಟ್ಟಿನಿಂದ ಜಯಿಸಿದವೋ, ಅದೇ ರೀತಿ ಇಂಧನ ಬಿಕ್ಕಟ್ಟನ್ನು ತಪ್ಪಿಸಲು ‘ಟೀಮ್ ಇಂಡಿಯಾ’ ಸ್ಫೂರ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶುಕ್ರವಾರ ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಆದ್ಯತೆಗಳು ಮತ್ತು ಕಾರ್ಯತಂತ್ರ
ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪ್ರಸಕ್ತ ಜಾಗತಿಕ ವಿದ್ಯಮಾನಗಳಿಂದ ಭಾರತದ ಮೇಲಾಗುವ ಪರಿಣಾಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಸರ್ಕಾರದ ಮುಖ್ಯ ಆದ್ಯತೆಗಳ ಕುರಿತು ಮಾತನಾಡಿದ ಅವರು, ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಸ್ಥಿರತೆ ಕಾಪಾಡುವುದು, ದೇಶದ ಇಂಧನ ಅಗತ್ಯತೆಗಳಲ್ಲಿ ಯಾವುದೇ ಕೊರತೆಯಾಗದಂತೆ ನಿರಂತರ ಪೂರೈಕೆ ಖಚಿತಪಡಿಸುವುದು, ತೈಲ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟದಂತೆ ಕ್ರಮ ವಹಿಸುವುದು, ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳ ಸರಬರಾಜನ್ನು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಮಾರ್ಚ್ 3 ರಿಂದಲೇ ಅಂತರ-ಸಚಿವಾಲಯಗಳ ಗುಂಪು ಪ್ರತಿದಿನ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದು, ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ವದಂತಿಗಳ ವಿರುದ್ಧ ಎಚ್ಚರಿಕೆ
ಇಂಧನ ಕೊರತೆಯ ಬಗ್ಗೆ ಹರಡಬಹುದಾದ ತಪ್ಪು ಮಾಹಿತಿ ಮತ್ತು ವದಂತಿಗಳ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕರಲ್ಲಿ ಭೀತಿ ಮೂಡದಂತೆ ತಡೆಯಲು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಕಾಲಕಾಲಕ್ಕೆ ಪ್ರಸಾರ ಮಾಡುವುದು ಅಗತ್ಯ ಎಂದು ಅವರು ರಾಜ್ಯಗಳಿಗೆ ಸೂಚಿಸಿದರು.
ಕರ್ನಾಟಕದ ಪಾಲ್ಗೊಳ್ಳುವಿಕೆ ಮತ್ತು ಪ್ರತಿಕ್ರಿಯೆ
ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಪರವಾಗಿ ಇಂಧನ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಿದ್ದರು. ಸಭೆಯ ನಂತರ ಮಾತನಾಡಿದ ಸಚಿವ ಮುನಿಯಪ್ಪ, ಸೌರಶಕ್ತಿ (Solar Energy) ಮತ್ತು ಬಯೋ ಗ್ಯಾಸ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂಬುದು ಪ್ರಧಾನಿಗಳ ಆಶಯವಾಗಿದೆ. ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಪೂರೈಕೆಯನ್ನು ಹೆಚ್ಚಿಸುವಂತೆ ನಾವು ಮಾಡಿದ ಮನವಿಗೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
