ಆ. 31ರವರೆಗೆ ಬೆಳೆ ವಿಮೆ ನೋಂದಣಿ ದಿನಾಂಕ ವಿಸ್ತರಿಸಲು ಕೇಂದ್ರಕ್ಕೆ ಶಿಫಾರಸು

ಮುಖ್ಯ ಕಾರ್ಯದರ್ಶಿಗೆ ಕೃಷಿ ಸಚಿವ ನರೇಂದ್ರಸ್ವಾಮಿ ಸೂಚನೆ

Untitled design (48)

​ಬೆಂಗಳೂರು ಆಗಸ್ಟ್ 14: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ವಿಳಂಬವಾಗಿದ್ದು, ರೈತರಿಗೆ ಅನುಕೂಲವಾಗುವಂತೆ ‘ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ’ ಯೋಜನೆಯಡಿ ಬೆಳೆ ವಿಮೆ ನೋಂದಣಿ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸುವಂತೆ ವಿಧಾನ ಪರಿಷತ್ ಶಾಸಕರು ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು, ವಿಮಾ ನೋಂದಣಿ ಗಡುವನ್ನು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲು ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಮನವಿಯಲ್ಲಿರುವ ಪ್ರಮುಖ ಅಂಶಗಳು:

​ಮಳೆ ಕೊರತೆ ಹಾಗೂ ಬಿತ್ತನೆ ಹಿನ್ನಡೆ: ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ವಾಡಿಕೆಯಂತೆ ಮಳೆಯಾಗದ ಪರಿಣಾಮ ಆಗಸ್ಟ್ 2ನೇ ವಾರ ಕಳೆದರೂ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ.

​ದಿನಾಂಕ ವಿಸ್ತರಣೆಯ ಅನಿವಾರ್ಯತೆ: ನಿಯಮಾನುಸಾರ ವಿಮೆ ನೋಂದಣಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ. ಆದರೆ ಆಗಸ್ಟ್ ಅಂತ್ಯದವರೆಗೂ ಮಧ್ಯಮಾವಧಿ ಹಾಗೂ ಅಲ್ಪಾವಧಿ ತಳಿಗಳ ಬಿತ್ತನೆಗೆ ಅವಕಾಶವಿರುವುದರಿಂದ ಗಡುವು ವಿಸ್ತರಿಸುವುದು ಅತ್ಯಗತ್ಯ.

​ಪ್ರಮುಖ ಬೆಳೆಗಳಿಗೆ ರಕ್ಷಣೆ: ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗಳಾದ ನೀರಾವರಿ ಹಾಗೂ ಮಳೆಯಾಶ್ರಿತ ಭತ್ತ, ರಾಗಿ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಾರರಿಗೆ ವಿಮಾ ರಕ್ಷಣೆ ದೊರಕಿಸಲು ದಿನಾಂಕವನ್ನು 31.08.2026ರವರೆಗೆ ವಿಸ್ತರಿಸಬೇಕು ಎಂದು ದಿನೇಶ್ ಗೂಳಿಗೌಡ ಪತ್ರದಲ್ಲಿ ಒತ್ತಾಯಿಸಿದ್ದರು.

ತ್ವರಿತ ಕ್ರಮಕ್ಕೆ ಕೃಷಿ ಸಚಿವರ ಸೂಚನೆ:

ರೈತರು ವಿಮಾ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ, ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಕೃಷಿ ಸಚಿವಾಲಯಕ್ಕೆ ತಕ್ಷಣವೇ ಪ್ರಸ್ತಾವನೆ ರವಾನಿಸುವಂತೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಮೂಲಕ ರೈತರ ಸಂಕಷ್ಟಕ್ಕೆ ನಮ್ಮ ಸರ್ಕಾರ ಸದಾ ಧಾವಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದ್ದಾರೆ.

Exit mobile version