ಬೆಂಗಳೂರು, ನವೆಂಬರ್ 12: ಕರ್ನಾಟಕದ ಪ್ರಮುಖ ಕೇಂದ್ರ ಕಾರಾಗೃಹವಾದ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ರಾಜಾತಿಥ್ಯ ಸವಿಯುತ್ತಿರುವ ಆಘಾತಕಾರಿ ಘಟನೆಗಳು ಒಂದರ ನಂತರ ಒಂದು ಬಯಲಾಗುತ್ತಿವೆ. ಮೊಬೈಲ್ ಫೋನ್, ಮದ್ಯ, ಡ್ಯಾನ್ಸ್ ಪಾರ್ಟಿ, ಐಷಾರಾಮಿ ಆಹಾರ ಇವೆಲ್ಲವೂ ಜೈಲಿನೊಳಗೆ ಸಾಮಾನ್ಯವಾಗಿ ನಡೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಎಲ್ಲಾ ವಿವಾದಗಳ ಕುರಿತು ಗೃಹ ಇಲಾಖೆ ಆಂತರಿಕ ತನಿಖೆ ಆರಂಭಿಸಿದೆ. ಬಂಧಿತರ ವೈರಲ್ ಆದ ಡ್ಯಾನ್ಸ್ ವಿಡಿಯೋಗೆ ಸಂಬಂಧ ಪಟ್ಟಂತೆ ಎಫ್ಐಆರ್ ದಾಖಲಾಗಿದೆ.
ಜೈಲಿನೊಳಗಿನ ಇಂತಹ ಘಟನೆ ಬಯಲಿಗೆ ಬಂದ ಬಳಿಕ ಆಂತರಿಕ ತನಿಖೆ ಪ್ರಾರಂಭವಾಗಿದೆ. ಮೊಬೈಲ್ ಬಳಕೆ ಹಾಗೂ ನಿಷೇಧಿತ ವಸ್ತುಗಳ ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ತರುಣ್ ಕೊಂಡೂರು, ಮತ್ತು ಶಂಕಿತ ಉಗ್ರ ಹಮೀದ್ ಶಕೀಲ್ ಸೇರಿದಂತೆ ಹಲವರ ವಿಚಾರಣೆ ನಡೆಯುತ್ತಿದೆ. ಈ ಕೈದಿಗಳು ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ಸಿಕ್ಕವು ಎಂಬುದರ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಈ ಘಟನೆಗಳ ಹಿನ್ನೆಲೆ ಗೃಹ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯ ವರದಿ ಶೀಘ್ರದಲ್ಲೇ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಕೈದಿಗಳ ಬಿಂದಾಸ್ ಜೀವನ ಶೈಲಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ಪರಪ್ಪನ ಅಗ್ರಹಾರ ಪೊಲೀಸರು ಕ್ರಮಕ್ಕೆ ಮುಂದಾಗಿದೆ. ಬ್ಯಾರಕ್ 8ರ ಕೊಠಡಿ ಸಂಖ್ಯೆ 7ರಲ್ಲಿ ನಡೆದ ಡ್ಯಾನ್ಸ್ ವಿಡಿಯೋ ಘಟನೆಯ ಕುರಿತು ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜು ಮತ್ತು ಚರಣ್ ರಾವ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ವಿರುದ್ಧ ನಿಷೇಧಿತ ವಸ್ತುಗಳ ಬಳಕೆ ಹಾಗೂ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ಆರೋಪ ಕೇಳಿಬಂದಿದೆ.
ದರ್ಶನ್ ರಾಜಾತಿಥ್ಯ ಪ್ರಕರಣ
ಕಳೆದ ವರ್ಷ ನಟ ದರ್ಶನ್‌ಗೆ ಜೈಲಿನೊಳಗೆ ದೊರೆತ ರಾಜಾತಿಥ್ಯ ಪ್ರಕರಣ ಈಗಲೂ ತನಿಖೆಯ ಹಂತದಲ್ಲೇ ಇದೆ. 2024ರ ಸೆಪ್ಟೆಂಬರ್‌ನಲ್ಲಿ ದಾಖಲಾದ ಮೂವರು ಆರೋಪಿಗಳ ಕೇಸ್‌ನಲ್ಲಿ ದರ್ಶನ್, ಕೆಲವು ರೌಡಿಗಳು ಮತ್ತು ಜೈಲು ಅಧಿಕಾರಿಗಳು ಸೇರಿ ಆರೋಪಿಯಾಗಿದ್ದರು. ಮೊದಲ ಪ್ರಕರಣದಲ್ಲಿ ದರ್ಶನ್ ಬಳಿ ಸಿಗರೇಟ್ ಪತ್ತೆಯಾದರೆ, ಎರಡನೇಯದರಲ್ಲಿ ಮೊಬೈಲ್ ಬಳಕೆಯ ಆರೋಪವಿತ್ತು.
ದರ್ಶನ್ ಪ್ರಕರಣದ ಬಳಿಕವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ 30 ಕ್ಕೂ ಹೆಚ್ಚು ಮೊಬೈಲ್, ಮಾದಕ ವಸ್ತು ಹಾಗೂ ಶಸ್ತ್ರ ಪತ್ತೆಯ ಕೇಸ್‌ಗಳು ದಾಖಲಾಗಿದ್ದರೂ, 27 ಕೇಸ್‌ಗಳ ಅಂತಿಮ ವರದಿ ಇನ್ನೂ ಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.





