ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ವತಿಯಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಜಮೀನು ಸ್ವಾಧೀನ ಹಾಗೂ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ ಅವರು, ಯೋಜನೆಗೆ ಹಣಕಾಸಿನ ಮೂಲವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ರೈತರಿಂದ ಪೆನ್ನು ಮತ್ತು ಪೇಪರ್ ಕೇಳಿದ್ದ ಡಿ.ಕೆ. ಶಿವಕುಮಾರ್ ಅವರೇ ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. “ಈಗ ಆ ಪೆನ್ನು ಮತ್ತು ಪೇಪರ್ ಅನ್ನು ಯಾರ ಉದ್ದಾರಕ್ಕಾಗಿ ಬಳಸುತ್ತಿದ್ದೀರಿ? 33 ಸಾವಿರ ಕೋಟಿ ರೂಪಾಯಿ ಹಣ ಮಾಡಲು ಪೆನ್ನು, ಪೇಪರ್ ಬಳಸುತ್ತಿದ್ದೀರಾ?” ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಡದಿ ಭಾಗದಲ್ಲಿ ರೈತರ ಜಮೀನನ್ನು ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ಕನಕಪುರದಲ್ಲಿ ರೈತರಿಗೆ ಜಮೀನು ಮಾರಾಟ ಮಾಡದಂತೆ ಬುದ್ಧಿವಾದ ಹೇಳುವ ಮುಖ್ಯಮಂತ್ರಿ, ಬಿಡದಿಯಲ್ಲಿ ರೈತರ ಜಮೀನನ್ನು ಪಡೆದುಕೊಳ್ಳಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದರು. “ಹಿಂದೆ ಎಕರೆಗೆ 2 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದವರು, ಈಗ ಏಕಾಏಕಿ 3 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದೇಕೆ? ಯೋಜನೆ ಜಾರಿಗೆ ಸರ್ಕಾರದ ಬಳಿ ಹಣವಿದೆಯೇ? ಹಣವಿದ್ದರೆ ಅದರ ದಾಖಲೆಗಳನ್ನು ಬಿಡುಗಡೆ ಮಾಡಿ,” ಎಂದು ಸವಾಲು ಹಾಕಿದರು.
ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗಿರುವುದನ್ನು ತಮ್ಮ ಕುಟುಂಬ ಸಹಿಸುವುದಿಲ್ಲ ಎಂಬ ರೀತಿಯಲ್ಲಿ ಆರೋಪಿಸಲಾಗುತ್ತಿದೆ ಎಂದು ಹೇಳಿದ ನಿಖಿಲ್, ತಮ್ಮ ಕುಟುಂಬಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿರುವ ಬಗ್ಗೆ ಯಾವುದೇ ಹೊಟ್ಟೆಕಿಚ್ಚಿಲ್ಲ ಎಂದರು. “ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೇನೂ ಹೊಟ್ಟೆಕಿಚ್ಚಿಲ್ಲ. ಆದರೆ ನಿಮ್ಮ ಅಧಿಕಾರ ಜನಪರವಾಗಿದೆಯೇ ಎಂಬುದನ್ನು ಮಾತ್ರ ಪ್ರಶ್ನಿಸುತ್ತೇವೆ,” ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟದ ಸಾಮರ್ಥ್ಯವನ್ನು ಉಲ್ಲೇಖಿಸಿದ ಅವರು, “ದೇವೇಗೌಡರ ಕೈಕಾಲುಗಳಿಗೆ ವಯಸ್ಸಾಗಿರಬಹುದು. ಆದರೆ ಅವರ ಮನೋಶಕ್ತಿ ಮತ್ತು ಹೋರಾಟದ ಕಿಚ್ಚಿಗೆ ವಯಸ್ಸಾಗಿಲ್ಲ,” ಎಂದರು.
ಜೆಡಿಎಸ್ ಪಾದಯಾತ್ರೆಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಸರ್ಕಾರ ಆತಂಕಗೊಂಡಿದೆ ಎಂದು ನಿಖಿಲ್ ಆರೋಪಿಸಿದರು. ಹೀಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಪಾದಯಾತ್ರೆ ಫ್ರೀಡಂ ಪಾರ್ಕ್‌ವರೆಗೆ ತಲುಪದಂತೆ ಮಾಡಲು ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರೇ ಮೇಕೆದಾಟು ಯೋಜನೆಗಾಗಿ ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿದ್ದರು. “ಆಗ ನಿಮ್ಮ ಪಾದಯಾತ್ರೆ ಕಾನೂನುಬಾಹಿರವಾಗಿರಲಿಲ್ಲವೇ? ಈಗ ರೈತರ ಪರವಾಗಿ ನಡೆಯುತ್ತಿರುವ ನಮ್ಮ ಪಾದಯಾತ್ರೆ ಮಾತ್ರ ಏಕೆ ಕಾನೂನುಬಾಹಿರವಾಗುತ್ತದೆ?” ಎಂದು ನಿಖಿಲ್ ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ಜೆಡಿಎಸ್ ಹೋರಾಟಕ್ಕೆ ಜನಬೆಂಬಲ ಹೆಚ್ಚುತ್ತಿರುವುದರಿಂದ ಸರ್ಕಾರ ವಿವಿಧ ರೀತಿಯ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ ನಿಖಿಲ್, ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಯಾವುದೇ ಯೋಜನೆಯನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
