ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಜಪ್ತಿ ಮಾಡಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆಕೋರರನ್ನು ಪತ್ತೆ ಹಚ್ಚಲು ಮಹಾರಾಷ್ಟ ಪೊಲೀಸರು ಬರಬೇಕಾದರೆ, ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯ ಗೃಹ ಇಲಾಖೆ, ಸಿಎಂ ಮತ್ತು ಡಿಸಿಎಂ ಭೋಜನ ಕೂಟಕ್ಕೆ ಮಾತ್ರ ಸೀಮಿತವಾಗಿದಿಯೇ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಸರ್ಕಾರ ಈ ಕೂಡಲೇ ಯುವ ಸಮುದಾಯಕ್ಕೆ ಮಾರಕವಾಗಿರುವ ಈ ಡ್ರಗ್ಸ್ ಮಾಫಿಯವನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೀಪಾವಳಿ ಕೊಡುಗೆ ನೆಪದಲ್ಲಿ ಜನರಿಗೆ ಕಾಂಗ್ರೆಸ್ ಮಹಾ ದೋಖಾ-ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರದ ಮಧ್ಯಮ ವರ್ಗದ ನಾಗರಿಕರ ಮೇಲೆ ಹೊಸ ತೆರಿಗೆ ಹೊರೆ ಏರಿಸಿ ‘ಮಹಾ ದೋಖಾ’ ಮಾಡುತ್ತಿದೆ ಎಂದು ಜನತಾ ದಳ (ಜೆಡಿಎಸ್) ಪಕ್ಷವು ಆರೋಪಿಸಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪವನ್ನು ಮಾಡಿದ್ದಾರೆ.
ಶುಭೋದಯ ಬೆಂಗಳೂರು! ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನೀವು ದೀಪ ಹಚ್ಚುತ್ತಿರುವಾಗ, ಕಾಂಗ್ರೆಸ್ ಬಿ ಖಾತಾದಿಂದ ಎ ಖಾತಾ ಮಾಡಲು 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಆರೋಪ ಮಾಡಿದ್ದಾರೆ.
ಈ ಹೊಸ ತೆರಿಗೆ ನಿಯಮದಿಂದ ಬೆಂಗಳೂರು ನಗರದ ಸುಮಾರು 7.5 ಲಕ್ಷ ಮನೆ ಮಾಲೀಕರು ಕಷ್ಟ ಪಡುವಂತಾಗುತ್ತದೆ.“100 ದಿನಗಳಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಈ ಸರ್ಕಾರ ಸಾಮಾನ್ಯ ನಾಗರಿಕರನ್ನು ಒತ್ತಾಯಿಸುತ್ತಿದೆ. ಆದರೆ ಇದರ ಬಗ್ಗೆ ಚಿಂತಿಸಬೇಡಿ. ಜೆಡಿಎಸ್ ಪಕ್ಷವು ಪ್ರತಿಯೊಬ್ಬ ಬಿ ಖಾತಾ ಹೊಂದಿರುವವರ ಪರವಾಗಿ ಹೋರಾಡುತ್ತದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ, ನಾವು ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ.” ಎಂದು ಹೇಳಿದ್ದಾರೆ.
ಈ ಬಗ್ಗೆ ನಾನು ಪೂರ್ಣ ವಿವರಗಳೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.





