ನವರಾತ್ರಿ ಹಬ್ಬಕ್ಕೆ ಗುಡ್‌ನ್ಯೂಸ್: ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ

ಜ್ಞಾನೇಶ್ (14)

ನವರಾತ್ರಿ ಹಾಗೂ ದುರ್ಗಾ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ತಿರುಪತಿ ಮತ್ತು ವಿಜಯಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಹಬ್ಬದ ಅವಧಿಯಲ್ಲಿ ಉಂಟಾಗಬಹುದಾದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ.

ತಿರುಪತಿ–ವಿಜಯಪುರ ಹಾಗೂ ವಿಜಯಪುರ–ತಿರುಪತಿ ಮಾರ್ಗದಲ್ಲಿ ತಲಾ ನಾಲ್ಕು ಟ್ರಿಪ್‌ಗಳಂತೆ ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲು ಸೇವೆ ಅಕ್ಟೋಬರ್ 4ರಿಂದ ಅಕ್ಟೋಬರ್ 25ರವರೆಗೆ ಲಭ್ಯವಿರಲಿದೆ. ಹಬ್ಬದ ಸಂದರ್ಭದಲ್ಲಿ ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರು ಹಾಗೂ ಪ್ರಯಾಣಿಕರಿಗೆ ಈ ವಿಶೇಷ ರೈಲು ಸೇವೆ ಅನುಕೂಲವಾಗಲಿದೆ.

ತಿರುಪತಿ–ವಿಜಯಪುರ ರೈಲು ಸಮಯ

ರೈಲು ಸಂಖ್ಯೆ 07419 ತಿರುಪತಿ–ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ಭಾನುವಾರ ತಿರುಪತಿಯಿಂದ ಹೊರಡಲಿದೆ. ಬೆಳಗ್ಗೆ 8.15ಕ್ಕೆ ತಿರುಪತಿಯಿಂದ ಹೊರಡುವ ರೈಲು ಅದೇ ದಿನ ರಾತ್ರಿ 10.25ಕ್ಕೆ ವಿಜಯಪುರ ತಲುಪಲಿದೆ.

ಇದೇ ರೀತಿ, ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 07420 ವಿಜಯಪುರ–ತಿರುಪತಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಪ್ರತಿ ಭಾನುವಾರ ರಾತ್ರಿ 11.35ಕ್ಕೆ ವಿಜಯಪುರದಿಂದ ಹೊರಡಲಿದೆ. ಈ ರೈಲು ಸೋಮವಾರ ಮಧ್ಯಾಹ್ನ 2.15ಕ್ಕೆ ತಿರುಪತಿ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ತಿರುಪತಿ–ವಿಜಯಪುರ ವಿಶೇಷ ರೈಲು ಮಾರ್ಗಮಧ್ಯೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ರೇಣಿಗುಂಟ, ಕೋಡೂರು, ರಾಜಂಪೇಟೆ, ಕಡಪ, ಯರ್ರಗುಂಟ, ತಾಡಿಪತ್ರಿ, ಗುತ್ತಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹೊಳೆ ಆಲೂರು, ಬದಾಮಿ, ಬಾಗಲಕೋಟೆ, ಆಲಮಟ್ಟಿ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.

ಈ ನಿಲುಗಡೆಗಳಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧ ಭಾಗಗಳ ಪ್ರಯಾಣಿಕರಿಗೆ ವಿಶೇಷ ರೈಲು ಸೇವೆಯ ಪ್ರಯೋಜನ ದೊರೆಯಲಿದೆ. ವಿಶೇಷವಾಗಿ ನವರಾತ್ರಿ ಹಾಗೂ ದುರ್ಗಾ ಪೂಜೆ ಹಿನ್ನೆಲೆಯಲ್ಲಿ ತಿರುಪತಿಗೆ ತೆರಳುವ ಭಕ್ತರಿಗೆ ಹೆಚ್ಚುವರಿ ರೈಲು ಸೇವೆ ಸಹಕಾರಿಯಾಗಲಿದೆ.

11 ಬೋಗಿಗಳ ವಿಶೇಷ ರೈಲು

ತಿರುಪತಿ–ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 11 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಒಂದು ಎಸಿ 2-ಟೈರ್, ಎರಡು ಎಸಿ 3-ಟೈರ್, ನಾಲ್ಕು ಸ್ಲೀಪರ್ ಕ್ಲಾಸ್ ಹಾಗೂ ಎರಡು ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಇರಲಿವೆ. ಇದರ ಜೊತೆಗೆ ಎರಡು ಲಗೇಜ್, ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರಿಗಾಗಿ ಮೀಸಲಾದ ಬೋಗಿಗಳು ಇರಲಿವೆ.

ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವುದರ ಜೊತೆಗೆ, ತಿರುಪತಿ–ವಿಜಯಪುರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಅನುಕೂಲಕರ ಪ್ರಯಾಣದ ಅವಕಾಶ ಕಲ್ಪಿಸುವುದು ಈ ವಿಶೇಷ ರೈಲು ಸೇವೆಯ ಪ್ರಮುಖ ಉದ್ದೇಶವಾಗಿದೆ.

Exit mobile version