ಮೈಸೂರು ಯುವ ದಸರಾಗೆ ಭರ್ಜರಿ ಸಿದ್ಧತೆ; 5 ದಿನಗಳ ಕಾರ್ಯಕ್ರಮ ಪಟ್ಟಿ ರಿಲೀಸ್

Your paragraph text (18)

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಯುವ ದಸರಾ’ ಕಾರ್ಯಕ್ರಮಗಳ ಅಧಿಕೃತ ಪಟ್ಟಿಯನ್ನು ಜಿಲ್ಲಾಡಳಿತ ಅಂತಿಮಗೊಳಿಸಿದೆ. ಈ ಬಾರಿ ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಪ್ರತಿದಿನವೂ ಖ್ಯಾತ ಕಲಾವಿದರಿಂದ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪದ ವಿಶಾಲ ಮೈದಾನದಲ್ಲಿ ಯುವ ದಸರಾ ಆಯೋಜಿಸಲಾಗುತ್ತಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ಅಕ್ಟೋಬರ್ 13ರಂದು ಯುವ ದಸರಾಗೆ ಚಾಲನೆ ನೀಡಲಿದ್ದಾರೆ.

ಅಕ್ಟೋಬರ್ 13: ಉದ್ಘಾಟನಾ ದಿನದಂದು ಬಿ. ಅಜನೀಶ್ ಲೋಕನಾಥ್ ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ. ಆರ್.ಜೆ. ಆಂಡಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಶ್ಲೇಶ್, ಅನನ್ಯಾ ಭಟ್, ಮಂಗ್ಲಿ, ಜಸ್ಕರನ್ ಸಿಂಗ್ ಹಾಗೂ ಐಶ್ವರ್ಯ ರಂಗರಾಜನ್ ಸೇರಿದಂತೆ ಹಲವು ಕಲಾವಿದರು ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.

ಅಕ್ಟೋಬರ್ 14: ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಶಂಕರ್-ಎಹ್ಸಾನ್-ಲಾಯ್ ತಂಡದಿಂದ ವಿಶೇಷ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ. ಸಂಗೀತಾಭಿಮಾನಿಗಳಿಗೆ ಈ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಲಿದೆ.

ಅಕ್ಟೋಬರ್ 15: ಬಹುಭಾಷಾ ಹಿನ್ನೆಲೆಯ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಅವರು ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಅಕ್ಟೋಬರ್ 16: ‘ಸ್ಯಾಂಡಲ್‌ವುಡ್ ನೈಟ್ಸ್’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ನಟ ಡಾ. ಶಿವರಾಜ್‌ಕುಮಾರ್, ನಟಿ ರಚಿತಾ ರಾಮ್, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲ್ ಓಕೆ ಹಾಗೂ ಅನುರಾಧಾ ಭಟ್ ಸೇರಿದಂತೆ ಹಲವು ಕಲಾವಿದರು ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಅಕ್ಟೋಬರ್ 17: ಸಮಾರೋಪ ದಿನದಂದು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಯುವ ದಸರಾಗೆ ತೆರೆ ಬೀಳಲಿದೆ.

ಇನ್ನೊಂದೆಡೆ, ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಸ್ಥರಿಗೆ ಜಿಲ್ಲಾಡಳಿತದ ವತಿಯಿಂದ ಬೆಳಗಿನ ಉಪಾಹಾರ ಕೂಟ ಮತ್ತು ನಿತ್ಯೋಪಯೋಗಿ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಾವುತರು ಮತ್ತು ಕುಟುಂಬಸ್ಥರು ಆಗಮಿಸಿ ಕಾಯುತ್ತಿದ್ದರು.

ಆದರೆ ಬೆಳಿಗ್ಗೆ 9.30 ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆಗಮಿಸದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರಿಗಾಗಿ ಕಾಯುತ್ತಿದ್ದ ಅವರು ಸ್ಥಳದಲ್ಲೇ ದೂರವಾಣಿ ಕರೆ ಮಾಡಿ, ಕಾಡಿನಿಂದ ಬಂದು ನಾಡಹಬ್ಬದ ಯಶಸ್ಸಿಗಾಗಿ ಶ್ರಮಿಸುತ್ತಿರುವ ಮಾವುತರು ಮತ್ತು ಕಾವಾಡಿಗಳನ್ನು ಉಪಾಹಾರಕ್ಕಾಗಿ ಕಾಯಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಅಸಮಾಧಾನಗೊಂಡು ಸ್ಥಳದಿಂದ ನಿರ್ಗಮಿಸಿದರು.

Exit mobile version