ಎಸ್.ಎಲ್. ಭೈರಪ್ಪ ಅವರ ಅಂತಿಮ ಯಾತ್ರೆ: ಮೈಸೂರಿನಲ್ಲಿ ಗಣ್ಯರ ಅಂತಿಮ ನಮನ

Untitled design (71)

ಮೈಸೂರು; (ಸೆ.25, 2025) ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದೆ. ಕಲಾಮಂದಿರದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನರು ತಮ್ಮ ಗೌರವವನ್ನು ಸಲ್ಲಿಸಲು ಆಗಮಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಜೆ 6:30 ರವರೆಗೆ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶವಿದೆ. ನಂತರ ಪಾರ್ಥಿವ ಶರೀರವನ್ನು ಜೆಎಸ್‌ಎಸ್ ಶವಗಾರಕ್ಕೆ ಸ್ಥಳಾಂತರಿಸಲಾಗುತ್ತದೆ.

ಅಂತಿಮ ವಿಧಿ-ವಿಧಾನ

ನಾಳೆ (26.ಸೆ.) ಬೆಳಿಗ್ಗೆ 8:30ಕ್ಕೆ ಎಸ್.ಎಲ್. ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. ಇದಾದ ಬಳಿಕ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ಕೆ ಭೈರಪ್ಪ ಅವರ ಕುಟುಂಬ, ಸ್ನೇಹಿತರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

ಗಣ್ಯರಿಂದ ಗೌರವ

ಕಲಾಮಂದಿರದಲ್ಲಿ ಎಸ್.ಎಲ್. ಭೈರಪ್ಪ ಅವರ ಅಂತಿಮ ದರ್ಶನ ಪಡೆದ ಗಣ್ಯರಲ್ಲಿ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಮತ್ತು ಕೆ. ಶಿವಕುಮಾರ್, ಮಾಜಿ ಸಂಸದ ಪ್ರತಾಪ್ ಸಿಂಹ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾಲಾಟ್ಕರ್, ಮತ್ತು ರಾಮಕೃಷ್ಣ ಮಠದ ಸ್ವಾಮೀಜಿಗಳು ಸೇರಿದಂತೆ ಇತರೆ ಗಣ್ಯರು ಆಗಮಿಸಿದ್ದರು.

ಎಚ್. ವಿಶ್ವನಾಥ್ ಹೇಳಿಕೆ

 ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಭೈರಪ್ಪ “ಎಸ್.ಎಲ್. ಭೈರಪ್ಪ ಕನ್ನಡ ಸಾಹಿತ್ಯ ಲೋಕದ ದಿಗ್ಗಜ. ಅವರು ಎಲ್ಲಾ ವಯಸ್ಸಿನವರನ್ನು ಸಾರ್ಥಕತೆಯಿಂದ ಬೆರೆಯುವಂತೆ ಮಾಡಿದವರು. ಆದರೆ, ಇಂತಹ ಮಹಾನ್ ಸಾಹಿತಿಗೆ ಜ್ಞಾನಪೀಠ ಅಥವಾ ರಾಜೋತ್ಸವ ಪ್ರಶಸ್ತಿಗಳು ದೊರಕದಿರುವುದು ಸರ್ಕಾರದ ಉತ್ಪೇಕ್ಷೆಯೋ ರಾಜಕಾರಣವೋ ಗೊತ್ತಿಲ್ಲ. ಇದು ಸಾಹಿತ್ಯ ಲೋಕಕ್ಕೆ ಮಾಡಿದ ಅಪಮಾನವೇ ಸರಿ. ನಾನು ಒಮ್ಮೆ ಭೈರಪ್ಪ ಅವರನ್ನು ಟೀಕಿಸಿದ್ದೆ, ಆದರೆ ಅವರ ಮನೆಗೆ ಭೇಟಿಯಾಗಿ ಆ ವಿಷಯವನ್ನು ಚರ್ಚಿಸಿದ್ದೆ. ಭೈರಪ್ಪ ಅವರ ಹೆಸರು ಕನ್ನಡ ಸಾಹಿತ್ಯದಲ್ಲಿ ನಿರಂತರವಾಗಿ ಉಳಿಯಲಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ” ಎಂದು ಭಾವುಕರಾದರು.

Exit mobile version