ಮೈಸೂರು: ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿಯ 2025ರ ಮೈಸೂರು ದಸರಾ ಅತ್ಯಂತ ಅದ್ಧೂರಿಯಾಗಿ ನಡೆಯಲು ಸಜ್ಜಾಗಿದೆ. ಸಾಮಾನ್ಯವಾಗಿ 10 ದಿನಗಳ ಕಾಲ ನಡೆಯುವ ಈ ಹಬ್ಬ ಈ ಸಲ ವಿಶೇಷವಾಗಿ 11 ದಿನಗಳವರೆಗೆ ವಿಸ್ತರಿಸಲಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಸಂಭ್ರಮದಿಂದ ನಡೆಯಲಿದೆ.. ಹಲವಾರು ವಿವಾದಗಳ ನಡುವೆಯೂ ಈ ಬಾರಿಯ ದಸರಾ ಹಬ್ಬವನ್ನು ಬುಕರ್ ಪ್ರಶಸ್ತಿ ವಿಜೇತೆ, ಪ್ರಸಿದ್ಧ ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರು ಸೆಪ್ಟೆಂಬರ್ 22ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್‌ಗೆ ಭರದ ಸಿದ್ಧತೆ ನಡೆಯುತ್ತಿದೆ. ಮೈಸೂರು ರಾಜವಂಶದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೋಹಣ ಮಾಡಿ, ನವರಾತ್ರಿ ಮತ್ತು ದಸರಾ ಹಬ್ಬದ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ. ನವರಾತ್ರಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಹಿನ್ನೆಲೆ ಅರಮನೆಯಾದ್ಯಂತ ದಸರಾ ಸಂಭ್ರಮ ಕಾಣುತ್ತಿದೆ.
ಈಗಾಗಲೇ ರತ್ನಖಚಿತ ಸಿಂಹಾಸನವನ್ನು ಅರಮನೆಯ ಸ್ಟ್ರಾಂಗ್ ರೂಮ್‌ನಿಂದ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಂದು ಬೆಳಗ್ಗೆ 5:30ರಿಂದ 5:45ರ ಒಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಅದೇ ದಿನ ಬೆಳಗ್ಗೆ 6:55ರಿಂದ 10:15ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ನಡೆಯಲಿದೆ. ನಂತರ ಬೆಳಗ್ಗೆ 11:35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ, ಕುದುರೆ ಹಾಗೂ ಹಸು ಸೇರಿದಂತೆ ಕಳಸ ಹೊತ್ತ ಮಹಿಳೆಯರು ಆಗಮಿಸಲಿದ್ದಾರೆ. ಬಳಿಕ ಮಂಗಳವಾದ್ಯದೊಂದಿಗೆ ಸವಾರ್ ತೊಟ್ಟಿಯ ಬಳಿ ಪೂಜಾ ಕೈಂಕರ್ಯ ನೆರವೇರಲಿದೆ.
ಮಧ್ಯಾಹ್ನ 12:42ರಿಂದ 12:58ರ ಒಳಗೆ ರತ್ನಖಚಿತ ಸಿಂಹಾಸನವನ್ನು ಯದುವೀರ್ ಅಲಂಕರಿಸಲಿದ್ದಾರೆ. ಮಧ್ಯಾಹ್ನ 2:05ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಪೂಜೆ ನಡೆಯಲಿದೆ. ಸೆಪ್ಟೆಂಬರ್ 23ರಿಂದ 29ರವರೆಗೆ ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ಜರುಗಲಿದೆ. ಸೆಪ್ಟೆಂಬರ್ 29ರಂದು ಬೆಳಗ್ಗೆ 10:10ರಿಂದ 10:20ರ ಒಳಗೆ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಗೊಳ್ಳುತ್ತದೆ. ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನಡೆಯುತ್ತದೆ.
ಆಯುಧ ಪೂಜೆಯ ದಿನದಂದು ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ಆರಂಭವಾಗುತ್ತದೆ. ಬೆಳಗ್ಗೆ 7:30ರಿಂದ 7:42ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕಳುಹಿಸಿ ಪೂಜೆ ಮಾಡಿಸಲಾಗುತ್ತದೆ. 8ರಿಂದ 8:40ರ ಒಳಗೆ ಕತ್ತಿ ಹಾಗೂ ಖಾಸ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ಕರೆತಂದು ಪೂಜೆ ನಡೆಯಲಿದೆ. 10:35ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿದ ಬಳಿಕ, ಅಂದಿನ ಸಂಜೆ ಸಿಂಹಾಸನದಿಂದ ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಕಂಕಣ ವಿಸರ್ಜನೆ ಮಾಡುತ್ತಾರೆ.
ಅಕ್ಟೋಬರ್ 2ರಂದು ಬೆಳಗ್ಗೆ 10 ಗಂಟೆಗೆ ವಿಜಯದಶಮಿ ಪೂಜೆ ಆರಂಭಿಸಿ, 10:55ರಿಂದ ವಿಜಯಯಾತ್ರೆ ಶುರುವಾಗುತ್ತದೆ. ಈ ಎಲ್ಲಾ ಪೂಜಾ ವಿಧಿಗಳ ಬಳಿಕ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಜಂಬೂಸವಾರಿ ಎಂದರೆ ದಸರಾ ಹಬ್ಬದ ಕಳಸ. ಅಂಬಾರಿ ಹೊತ್ತ ಆನೆಗಳ ಮೆರವಣಿಗೆ, ಸಾಂಸ್ಕೃತಿಕ ತಂಡಗಳು, ಬ್ಯಾಂಡ್ ಸೆಟ್‌ಗಳು ನಗರದಾದ್ಯಂತ ಸಂಚರಿಸಿ ಜನರನ್ನು ರಂಜಿಸುತ್ತವೆ.





