9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಹ*ತ್ಯೆ; ಆರೋಪಿಗೆ ಗುಂಡೇಟು

Untitled design 2025 10 09t232918.724

ಮೈಸೂರು: ರಾಜ್ಯದ ಪ್ರತಿಷ್ಠಿತ ಮೈಸೂರು ದಸರಾ ಸಂಭ್ರಮದ ನಡುವೆ ನಡೆದ ಒಂದು ಘೋರ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಲ್ಬರ್ಗದ ಅಲೆಮಾರಿ ಕುಟುಂಬದೊಂದಿಗೆ ದಸರಾ ಹಬ್ಬದಲ್ಲಿ ಬಲೂನ್ ಮಾರಾಟಕ್ಕೆ ಆಗಮಿಸಿದ್ದ 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಅವನನ್ನು ವಶಕ್ಕೆ ಪಡೆದಿದ್ದಾರೆ.

ಗುಲ್ಬರ್ಗದಿಂದ ಆಗಮಿಸಿದ್ದ ಅಲೆಮಾರಿ ಕುಟುಂಬವು ಮೈಸೂರು ದಸರಾದಲ್ಲಿ ಬಲೂನ್ ಸೇರಿದಂತೆ ವಿವಿಧ ವಸ್ತುಗಳ ಮಾರಾಟದಲ್ಲಿ ತೊಡಗಿತ್ತು. ಈ ಕುಟುಂಬವು ಜಾತ್ರೆಗಳಿಗೆ ತೆರಳಿ ಟೆಂಟ್‌ನಲ್ಲಿ ವಾಸಿಸುತ್ತಾ ವ್ಯಾಪಾರ ಮಾಡುವುದು ಸಾಮಾನ್ಯ. ಆದರೆ, ಈ ಬಾರಿಯ ದಸರಾದಲ್ಲಿ ಅವರ 9 ವರ್ಷದ ಮಗಳು ದುರಂತಕ್ಕೆ ಒಳಗಾಯಿತು. ತಡರಾತ್ರಿ ಟೆಂಟ್‌ನಲ್ಲಿ ಮಲಗಿದ್ದ ಕುಟುಂಬ, ಮಳೆಯಿಂದಾಗಿ ಮುಂಜಾನೆ ಎದ್ದಾಗ ಬಾಲಕಿಯು ನಾಪತ್ತೆಯಾಗಿರುವುದನ್ನು ಗಮನಿಸಿತು. ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದಿದ್ದಾಗ, ಕುಟುಂಬವು ಗಾಬರಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿತು.

ಮೈಸೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಒಂದು ತಂಡವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೆ, ಮತ್ತೊಂದು ತಂಡವು ದಸರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿತು. ಟೆಂಟ್‌ನಿಂದ ಕೆಲವೇ ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಯಿತು. ಮೇಲ್ನೋಟಕ್ಕೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಎಸಗಿರುವುದು ಸ್ಪಷ್ಟವಾಯಿತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಕಾರ್ತಿಕ್‌ನನ್ನು ಗುರುತಿಸಿದ ಪೊಲೀಸರು, ಅವನು ಕೊಳ್ಳೇಗಾಲದ ಕಡೆಗೆ ಪರಾರಿಯಾಗಿರುವುದನ್ನು ಕಂಡುಕೊಂಡರು.

ಕೊಳ್ಳೇಗಾಲದಲ್ಲಿ ನಡೆದ ಕಾರ್ಯಾಚರಣೆಯ ವೇಳೆ, ಮೇಟಗಳ್ಳಿ ಬಳಿ ಆರೋಪಿಯ ಸುಳಿವು ದೊರೆತಿತು. ಆರೋಪಿ ಕಾರ್ತಿಕ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದ ಪೊಲೀಸರು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Exit mobile version