ಮೈಸೂರು; ಇಂದು ಬೆಳಗ್ಗೆ (ಸೆ.22,2025) ನಾಡಹಬ್ಬ ಮೈಸೂರು ದಸರಾವನ್ನು, ಬೂಕರ್‌ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾನು ನೂರಾರು ಸಾರಿ ದೀಪ ಬೆಳಗಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಸಲ್ಲಿಸಿದ್ದೇನೆ. ಹಿಂದೂ ಧರ್ಮದ ಜೊತೆಗೆ ನನ್ನ ಸಂಬಂಧ ಕುರಿತು ನನ್ನದೇ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟವಾಗುತ್ತದೆ ಓದಿ ಎಂದು ತಮಗೂ ಹಿಂದೂ ಧರ್ಮದ ಮೇಲೆ ಗೌರವ ಇದೆ ಎಂದು ಪರೋಕ್ಷವಾಗಿ ಹೇಳಿದರು. ಇದೇ ವೇಳೆ ತಾಯಿ ಚಾಮುಂಡಿ ಕೃಪಾರ್ಶೀವದಿಂದ ದಸರಾ ಉದ್ಘಾಟಿಸಿದ್ದೇನೆ ಎಂದು ಭಾವುಕರಾದರು.
ನನಗೆ ಬೂಕರ್ ಪ್ರಶಸ್ತಿ ಬಂದರೆ ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ ಎಂದು ನನ್ನ ಸ್ನೇಹಿತೆ ಹರಕೆ ಹೊತ್ತಿದ್ದರು ಎಂದು ಈ ಸ್ನೇಹಿತೆಯನ್ನ ನೆನೆದು ಭಾವುಕರಾದರು. ನಂತರ ಮೈಸೂರಿನ ಉರ್ದು ಭಾಷಿಕರು ನವರಾತ್ರಿ ಪ್ರತಿ ದಿನಕ್ಕೂ ಒಂದೊಂದು ಹೆಸರು ಇಟ್ಟು ಕೊಂಡಿದ್ದಾರೆ ಅದರಲ್ಲಿ ಸಿಲ್ಹಿಂಗನ್ ಎಂಬೂದು ಒಂದು ಹೆಸರಾಗಿದೆ. ಹೀಗೆ ಮುಸಲ್ಮಾನರು ನವರಾತ್ರಿ ಆಚರಿಸುತ್ತಾರೆ ಎಂದು ಹೇಳಿದರು. ಜೊತೆಗೆ ನವರಾತ್ರಿ ಹಾಗೂ ವಿಜಯದಶಮಿ ಹಬ್ಬವು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಹಬ್ಬವಾಗಿದೆ ಎಂದರು.
ನಂತರ ಮೈಸೂರು ವಡೆಯರ್ ಬಗ್ಗೆ ಮಾತನಾಡಿದ ಅವರು, ಜಯ ಚಾಮರಾಜ ಒಡೆಯರ್ ಮುಸ್ಲಿಂರ ಬಗ್ಗೆ ಅನುಮಾನ ಇಟ್ಟು ಕೊಂಡಿರಲಿಲ್ಲ. ತಮ್ಮ ಅಂಗರಕ್ಷಕರಾಗಿ ಮುಸ್ಲಿಂರನ್ನು ಇಟ್ಟು ಕೊಂಡಿದ್ದರು. ನಮ್ಮ ಕುಟುಂಬದ ಒಬ್ಬರು ಈ ಸೇನೆಯಲ್ಲಿ ಇದ್ದರು ಎಂದರು. ಮೈಸೂರು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದಲ್ಲಿ ಮಾನವೀಯ ತುಡಿತ ಇದೆ. ತಾಯಿ ಚಾಮುಂಡಿ ನಮ್ಮಲ್ಲಿನ ದ್ವೇಷ, ಅಸಹಿಷ್ಣುತೆ ನಿವಾರಣೆ ಮಾಡಲಿ. ಶಾಂತಿ, ಸಹಬಾಳ್ವೆ ಮಾಡೋಣಾ ಎಂದರು. ನನ್ನ ಧಾರ್ಮಿಕ ನಂಬಿಕೆಗಳ ಜೀವನಪರವಾಗಿವೆ. ನಾವು ಅಸ್ತ್ರಗಳಿಂದ , ಹಗೆಗಳಿಂದ ಬದುಕು ಗೆಲ್ಲಲು ಆಗಲ್ಲ. ಪ್ರೀತಿಯಿಂದ ಬದುಕು ಗೆಲ್ಲಬೇಕು ಎಂದು ಬಾನು ಮುಷ್ತಾಕ್ ಹೇಳಿದ್ದಾರೆ.ಕಡೆಗೆ ಬಾಗಿನ ಎಂಬ ಕವನವನ್ನ ಹೇಳಿ ತಮ್ಮ ಭಾಷಣವನ್ನ ಮುಗಿಸಿದರು.
