ಬೆಂಗಳೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಇಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ವಾರ್ತಾ ಇಲಾಖೆಯ ಜೊತೆಗೆ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಅವರಿಗೆ ವಹಿಸಿ ಸರ್ಕಾರ ಆದೇಶಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದ ಮೂಲನಿವಾಸಿಗಳಾದ ಎಂ.ಎನ್.ಅನುಚೇತ್ ಅವರು, ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ 2006ರಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದು ತಾಂತ್ರಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಬಳಿಕ ನಾಗರಿಕ ಸೇವೆಯತ್ತ ಆಸಕ್ತಿ ಬೆಳೆಸಿಕೊಂಡು ಶ್ರಮಿಸಿದ ಇವರು, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಪಡೆದು, 2009ರ ಬ್ಯಾಚ್ ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ಚೈತನ್ಯ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಅನುಚೇತ್ ಅವರು, ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಮತ್ತು ಸಮರ್ಥ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ. ಹಿಂದೆ ಅವರು ನಡೆಸಿದ ಅತ್ಯುತ್ತಮ ತನಿಖಾ ಕಾರ್ಯಗಳನ್ನು ಮನ್ನಿಸಿ ಕೇಂದ್ರ ಸರ್ಕಾರವು ಇವರಿಗೆ ಪ್ರತಿಷ್ಠಿತ ‘ಕೇಂದ್ರ ಗೃಹ ಸಚಿವರ ತನಿಖೆಗಾಗಿನ ಅತ್ಯುತ್ತಮ ಪದಕ’ ನೀಡಿ ಗೌರವಿಸಿದೆ.
2011ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ಎಎಸ್ಪಿ) ವೃತ್ತಿಜೀವನ ಆರಂಭಿಸಿದ ಇವರು, ತದನಂತರ ಸಿಐಡಿ (CID) ವಿಭಾಗದ ಎಸ್ಪಿಯಾಗಿ, ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ (DCP Central) ಆಗಿ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಅತ್ಯಂತ ಸಮರ್ಥವಾಗಿ ಸೇವೆ ಸಲ್ಲಿಸಿ, ನಗರದ ಸಂಚಾರ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹುದ್ದೆಗೆ ಬರುವ ಮುನ್ನ ಅವರು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ (DIGP) ಆಗಿ ಕಾರ್ಯನಿರ್ವಹಿಸುತ್ತಿದ್ದರು.
