ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಖಂಡಿಸಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಒಂದಾಗಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಕಾವೇರಿ ಜಲಾಶಯಗಳಲ್ಲಿನ ನೀರಿನ ಕೊರತೆಯ ನಡುವೆಯೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಂಡ್ಯ ನಗರದ ಸಂಜಯ ಸರ್ಕಲ್‌ನಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ಬೃಹತ್ ಧರಣಿ ನಡೆಸಿ ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದು,. ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ನೀರು ಬಿಡುಗಡೆಗೆ ಆದೇಶಿಸಿರುವುದು ಅನ್ಯಾಯ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಕಾನೂನು ಹೋರಾಟ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾವೇರಿ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಹೆಚ್ಚುತ್ತಿದ್ದು, ಮಂಡ್ಯ ಜಿಲ್ಲಾ ಪಡಿತರ ವಿತರಕರ ಸಂಘವೂ ಪ್ರತಿಭಟನೆಗೆ ಕೈಜೋಡಿಸಿದೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕೆಂದು ಆಗ್ರಹಿಸಿದರು. ಇದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಬೆಂಗಳೂರು–ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡರು. ಪ್ರತಿಭಟನಾಕಾರರು ರಾಜ್ಯಕ್ಕೆ ಕುಡಿಯುವ ನೀರು ಮತ್ತು ಕೃಷಿಗೆ ಅಗತ್ಯವಿರುವ ನೀರಿನ ಲಭ್ಯತೆ ಖಚಿತಪಡಿಸಿದ ನಂತರವೇ ಬೇರೆ ರಾಜ್ಯಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಇನ್ನೊಂದೆಡೆ ಶ್ರೀರಂಗಪಟ್ಟಣ ತಾಲೂಕಿನಲ್ಲೂ ಬಿಜೆಪಿ ವತಿಯಿಂದ ಪ್ರತ್ಯೇಕ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ಕಾವೇರಿ ವಿಷಯದಲ್ಲಿ ಸರ್ಕಾರ ದೃಢ ನಿಲುವು ತಾಳಬೇಕು ಎಂದು ಆಗ್ರಹಿಸಿದ್ದು, ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಜನರು ಒಗ್ಗಟ್ಟಿನಿಂದ ಕಾವೇರಿ ನೀರಿನ ಹಕ್ಕನ್ನು ಕಾಪಾಡುವ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. ಮಂಡ್ಯ ಸೇರಿದಂತೆ ಕಾವೇರಿ ಕಣಿವೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
