ದಕ್ಷಿಣ ಕನ್ನಡ (ಸೆ.25, 2025): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾರೆ ಎಂಬ ಆಘಾತಕಾರಿ ಆರೋಪದ ಬುರುಡೆ ಗ್ಯಾಂಗ್ ಪ್ರಕರಣವು ದೇಶದ ಗಮನ ಸೆಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್ ಮ್ಯಾನ್ ಚಿನ್ನಯ್ಯ’ ಸೇರಿದಂತೆ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಮೇ 5, 2025 ರಂದು ವಜಾಗೊಳಿಸಿತು. ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲ, ಬದಲಿಗೆ ಹಣ ವಸೂಲಿಗೆ ಸಂಬಂಧಿಸಿದ ವೈಯಕ್ತಿಕ ಲಾಭದ ಅರ್ಜಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ಖಂಡಿಸಿತ್ತು.
ಕೋರ್ಟ್‌ನ ತೀರ್ಪಿನಲ್ಲಿ, ಈ ಅರ್ಜಿಯನ್ನು ‘ಪೈಸಾ ಇಂಟ್ರೆಸ್ಟ್ ಲಿಟಿಗೇಷನ್’, ‘ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಷನ್’ ಮತ್ತು ‘ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಷನ್’ ಎಂದು ಕರೆದು, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೆ, ವರ್ಷಗಳ ತಡವಾಗಿ ಸಲ್ಲಿಕೆಯಾದ ಈ ಅರ್ಜಿಗೆ ತೀವ್ರ ಛೀಮಾರಿ ಹಾಕಿತ್ತು. ಆದರೆ, ಈ ಆದೇಶವನ್ನು ಮುಚ್ಚಿಟ್ಟ ಬುರುಡೆ ಗ್ಯಾಂಗ್, ರಾಜ್ಯ ಸರ್ಕಾರಕ್ಕೆ ವಂಚಿಸಿ, ಅದೇ ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚನೆಗೆ ಒತ್ತಾಯಿಸಿತ್ತು.
ಸರ್ಕಾರಕ್ಕೆ ಮೋಸ, ಎಸ್‌ಐಟಿ ರಚನೆ
ಸುಪ್ರೀಂ ಕೋರ್ಟ್‌ನ ಆದೇಶವನ್ನು ಗೌಪ್ಯವಾಗಿಟ್ಟು, ಬುರುಡೆ ಗ್ಯಾಂಗ್ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಎಸ್‌ಐಟಿ ರಚನೆಗೆ ಒತ್ತಾಯಿಸಿತ್ತು. ಸರ್ಕಾರಕ್ಕೆ ಕೋರ್ಟ್ ಆದೇಶದ ಬಗ್ಗೆ ತಿಳಿದಿರಲಿಲ್ಲ, ಆದರೂ ಚಿನ್ನಯ್ಯನ ದೂರಿನ ಸತ್ಯಾಸತ್ಯತೆಯನ್ನು ಗಮನಿಸಿ ಎಸ್‌ಐಟಿ ರಚಿಸಿತ್ತು. ಇದೇ ರೀತಿಯಾಗಿ, ಬೆಳ್ತಂಗಡಿ ಕೋರ್ಟ್‌ನಲ್ಲಿ ಚಿನ್ನಯ್ಯ ದೂರು ದಾಖಲಿಸಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಮುಚ್ಚಿಟ್ಟು, ಕಾನೂನು ವ್ಯವಸ್ಥೆಗೂ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಸತ್ಯವಿರಬಹುದೆಂದು ಭಾವಿಸಿದ ಸರ್ಕಾರ, ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ತಿಳಿಯದೇ ಎಸ್‌ಐಟಿಯನ್ನು ರಚಿಸಿತ್ತು. ಆದರೆ, ಈ ಆದೇಶವನ್ನು ಮರೆಮಾಚಿದ ಬುರುಡೆ ಗ್ಯಾಂಗ್, ಸರ್ಕಾರ, ಪೊಲೀಸ್ ವ್ಯವಸ್ಥೆ ಮತ್ತು ಕೋರ್ಟ್‌ಗೂ ದಾರಿತಪ್ಪಿಸಿದೆ ಎಂಬ ಆರೋಪವಿದೆ. ಚಿನ್ನಯ್ಯ ಮತ್ತು ಗ್ಯಾಂಗ್‌ನ ಈ ನಡೆಯು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ.





