ರೈತರಿಗೆ ಗುಡ್ ನ್ಯೂಸ್: ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಾಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ !

Untitled design 2025 12 07T191537.510

ಬೆಂಗಳೂರು, ಡಿಸೆಂಬರ್ 07: ಇತ್ತೀಚೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೆಕ್ಕೆಜೋಳ (Maize) ಖರೀದಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಾನುವಾರ ಮಹತ್ವದ ಆದೇಶವನ್ನು ಹೊರಡಿಸಿದೆ. ರೈತರಿಂದ ಮೆಕ್ಕೆಜೋಳ ಖರೀದಿಯ ಗರಿಷ್ಠ ಮಿತಿಯನ್ನು ಪ್ರತಿ ರೈತರಿಗೆ 20 ಕ್ವಿಂಟಾಲ್‌ನಿಂದ 50 ಕ್ವಿಂಟಾಲ್‌ಗೆ ಹೆಚ್ಚಿಸಿ ಆದೇಶ ನೀಡಲಾಗಿದೆ. ಈ ನಿರ್ಧಾರದಿಂದಾಗಿ ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನವೇ ಮೆಕ್ಕೆಜೋಳ ಬೆಳೆಗಾರರಿಗೆ (Farmers) ದೊಡ್ಡ ಮಟ್ಟದ ನೆರವು ಸಿಕ್ಕಂತಾಗಿದೆ.

ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರವು ಈ ಹಿಂದೆಯೇ ಬೆಂಬಲ ಬೆಲೆಯನ್ನು ನಿಗದಿಪಡಿಸಿತ್ತು. ಪ್ರಸ್ತುತ, ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನೀಡಲಾಗುತ್ತದೆ. ಹೆಚ್ಚಿಸಿದ ಖರೀದಿ ಮಿತಿಯೊಂದಿಗೆ ಈ ಬೆಂಬಲ ಬೆಲೆ ಮುಂದುವರೆಯುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಇದು ಆರ್ಥಿಕವಾಗಿ ದೊಡ್ಡ ಲಾಭ ತರಲಿದೆ.

ಖರೀದಿ ಪ್ರಕ್ರಿಯೆಯು FRUITS ತಂತ್ರಾಂಶದಲ್ಲಿ ನೋಂದಾಯಿತ ಜಮೀನು ಆಧಾರದ ಮೇಲೆ ನಡೆಯಲಿದೆ. ಸಹಕಾರ ಸಂಘಗಳ (PACS) ಮೂಲಕ ಮೆಕ್ಕೆಜೋಳ ಖರೀದಿಗೆ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ರೈತರು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸರ್ಕಾರಕ್ಕೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಸರ್ಕಾರದ ಹೊಸ ತಿದ್ದುಪಡಿ ಆದೇಶವು ರೈತರ ಹಿತದೃಷ್ಟಿಯಿಂದ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹಿಂದಿನ ಆದೇಶದಲ್ಲಿ ಪ್ರತಿ ರೈತರಿಗೆ ಖರೀದಿ ಮಿತಿಯನ್ನು 20 ಕ್ವಿಂಟಾಲ್‌ಗೆ ನಿಗದಿಪಡಿಸಲಾಗಿತ್ತು. ಆದರೆ, ಈಗಿನ ಆದೇಶದಲ್ಲಿ ಈ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ:

ಹಿಂದಿನ ಆದೇಶ: FRUITS ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್‌ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400 ರಂತೆ ಖರೀದಿಸಲು ಅವಕಾಶವಿತ್ತು.

ಪ್ರಸ್ತುತ ತಿದ್ದುಪಡಿ: FRUITS ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 50 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400 ರಂತೆ ಖರೀದಿಸತಕ್ಕದ್ದು. ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಆದೇಶಿಸಿದೆ.

ಈ ತಿದ್ದುಪಡಿಯ ಮೂಲಕ, ಸರ್ಕಾರವು ಪ್ರತಿ ರೈತರಿಂದ ಖರೀದಿಸುವ ಮೆಕ್ಕೆಜೋಳದ ಪ್ರಮಾಣವನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ.

ಮೆಕ್ಕೆಜೋಳ ಖರೀದಿಯ ವಿಚಾರದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಸರ್ಕಾರ ಸೇರಿಸಿದೆ. ಈ ಮೊದಲು ಡಿಸ್ಟಿಲರಿಗಳ ಸಮೀಪದ ಪಿಎಸಿಎಸ್‌ಗಳ (PACS) ಮೂಲಕ ಖರೀದಿಗೆ ಆದ್ಯತೆ ನೀಡಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಆದೇಶದಲ್ಲಿ ಅದನ್ನು ರದ್ದುಗೊಳಿಸಲಾಗಿದೆ.

ಹೊಸ ಆದೇಶ: ಇನ್ನು ಮುಂದೆ “ಡಿಸ್ಟಿಲರಿಗಳ ಸಮೀಪದ PACS ಗಳ ಮೂಲಕ ಖರೀದಿಸಲು ಆದ್ಯತೆ ನೀಡತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ.

ಈ ನಿರ್ಧಾರದಿಂದಾಗಿ ಮೆಕ್ಕೆಜೋಳವನ್ನು ಕೊಳ್ಳುವ ಡಿಸ್ಟಿಲರಿ (Liquor/Ethanol factories) ಕಾರ್ಖಾನೆಗಳಿಗೆ ಸುಲಭವಾಗಿ ಮೆಕ್ಕೆಜೋಳ ಲಭ್ಯವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ರೈತರಿಗೆ ಕೂಡ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಮತ್ತಷ್ಟು ಅವಕಾಶಗಳು ಸಿಗಲಿವೆ.

Exit mobile version