ಬೆಳಗಾವಿ: ಕರ್ನಾಟಕ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದಲ್ಲಿ ಇಂದು (ಡಿ.17) ರಂದು ತೀವ್ರ ಗದ್ದಲ ಉಂಟಾಗಿತ್ತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೊಠಡಿ ಮುಂದೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸೌಲಭ್ಯ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಲು ಬಂದಿದ್ದ ರೈತರನ್ನು ಸಚಿವ ಮಧುಬಂಗಾರಪ್ಪ ಸರಿಯಾಗಿ ಸ್ಪಂದಿಸದೇ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯದ ಸೌಲಭ್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಗ್ರಾಮಸ್ಥರು ಮತ್ತು ರೈತರು ಸುವರ್ಣಸೌಧಕ್ಕೆ ಆಗಮಿಸಿದ್ದರು. ಸಚಿವ ಮಧು ಬಂಗಾರಪ್ಪ ಅವರ ಕೊಠಡಿಯಲ್ಲಿ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವ ಮಧುಬಂಗಾರಪ್ಪ ರೈತರಿಗೆ ಸರಿಯಾಗಿ ಸ್ಪಂದಿಸದೇ ನಾನು ಎಲ್ಲ ಕೆಲಸಗಳನ್ನೂ ಮಾಡಿದ್ದೇನೆ, ಇಲ್ಲಿಂದ ಹೊರಡಿ ಎಂದು ಜೋರಾಗಿ ಕಿರುಚಿ ಹೇಳಿದ್ದಾರೆ ಮಾತನಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸಚಿವರ ಈ ವರ್ತನೆಯಿಂದ ಬೇಸರಗೊಂಡ ರೈತರು, ಸುವರ್ಣಸೌಧದ ಮೊದಲ ಮಹಡಿಯಲ್ಲಿ ಸಚಿವ ಮಧುಬಂಗಾರಪ್ಪ ಕೊಠಡಿ ಎದುರು ನಿಂತು ರೈತರಿಗೆ ಸರಿಯಾಗಿ ಸ್ಪಂದಿಸದ ನೀವು ಎಂಥ ಸಚಿವರು ?ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘೋಷಣೆ ಕೂಗುತ್ತಿದ್ದ ರೈತರನ್ನು ಸಮಾಧಾನಪಡಿಸಿ, ಸಚಿವರ ಕೊಠಡಿಯಿಂದ ಹೊರಕ್ಕೆ ಕರೆದುಕೊಂಡು ಬಂದರು. ರೈತರು ತಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದ್ದು, ಪೊಲೀಸರು ಶಾಂತಿಯುತವಾಗಿ ಮನವೊಲಿಕೆ ಮಾಡಿ ರೈತರನ್ನು ಕಳುಹಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ದೀರ್ಘಕಾಲದ ಸಮಸ್ಯೆಯಾಗಿದೆ. ಶಾಚಾಲಯ, ಕುಡಿಯುವ ನೀರು, ತರಗತಿ ಕೊಠಡಿಗಳು ಇತ್ಯಾದಿ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಮತ್ತು ಗ್ರಾಮಸ್ಥರು ಈ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸಚಿವರ ನಿರ್ಲಕ್ಷ್ಯದಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ.
ಸಚಿವ ಮಧು ಬಂಗಾರಪ್ಪ ಈ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ರೈತರ ಮನವಿಯನ್ನು ಶೀಘ್ರ ಪರಿಗಣಿಸಿ ಸಮಸ್ಯೆ ಪರಿಹರಿಸಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.
