ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ (PS) ಸರ್ದಾರ್ ಸರ್ಫರಾಜ್ ಖಾನ್ ಅವರ ನಿವಾಸ ಸೇರಿದಂತೆ ರಾಜ್ಯದ ಒಟ್ಟು 10 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದ.
ದಾಳಿ ನಡೆದ ಸ್ಥಳಗಳು
ಹಲಸೂರಿನಲ್ಲಿರುವ ಸರ್ಫರಾಜ್ ಖಾನ್ ಅವರ ಮುಖ್ಯ ನಿವಾಸ ಸೇರಿದಂತೆ ನಗರದ ವಿವಿಧೆಡೆ ಇರುವ 7 ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಜೊತೆಗೆ ಕೊಡಗಿನ ಸುಂದರ ಪರಿಸರದಲ್ಲಿರುವ ಎರಡು ಬೃಹತ್ ಕಾಫಿ ಎಸ್ಟೇಟ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದರೊಟ್ಟಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯಲ್ಲಿರುವ ಐಷಾರಾಮಿ ರೆಸಾರ್ಟ್ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿವೆ.
ಕೆಎಎಸ್ ಅಧಿಕಾರಿಯಾಗಿರುವ ಸರ್ದಾರ್ ಸರ್ಫರಾಜ್ ಖಾನ್ ಅವರು ಸದ್ಯ ವಸತಿ ಇಲಾಖೆಗೆ ನಿಯೋಜನೆಗೊಂಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಬಗ್ಗೆ ಕೇಳಿಬಂದ ಖಚಿತ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬುಧವಾರ ಬೆಳ್ಳಂಬೆಳಿಗ್ಗೆ 5:30ರಿಂದಲೇ ಅಧಿಕಾರಿಗಳ ತಂಡ ಕಾರ್ಯಪ್ರವೃತ್ತವಾಗಿದೆ. ಒಟ್ಟು 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಎಲ್ಲಾ 10 ಸ್ಥಳಗಳಲ್ಲಿಯೂ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಲಾಕರ್‌ಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ. ವಶಪಡಿಸಿಕೊಂಡ ದಾಖಲೆಗಳಿಗೂ ಮತ್ತು ಅವರ ಅಧಿಕೃತ ಆದಾಯಕ್ಕೂ ಇರುವ ವ್ಯತ್ಯಾಸದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಚಿವರ ಆಪ್ತ ವಲಯದ ಅಧಿಕಾರಿಯ ಮೇಲೆಯೇ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲೂ ಭಾರೀ ಸಂಚಲನ ಮೂಡಿಸಿದೆ.
ದಾಳಿಯಲ್ಲಿ ಸಿಕ್ಕರುವ ನಗದು ಮತ್ತು ಒಟ್ಟು ಅಕ್ರಮ ಆಸ್ತಿಯ ಮೊತ್ತದ ಬಗ್ಗೆ ಲೋಕಾಯುಕ್ತ ಇಲಾಖೆಯು ಇನ್ನೂ ಅಧಿಕೃತ ಮಾಹಿತಿ ತಿಳಿಸಿಲ್ಲ. ಅಧಿಕಾರಿಗಳ ಮುಂದಿನ ಕ್ರಮ ಏನು ಎಂಬುದನ್ನ ಕಾದುನೋಡಬೇಕಿದೆ.
