ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಸಿಎಂ ಕುರ್ಚಿ ಕದನದ ಕುರಿತಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ನನ್ನ ತಂದೆ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷವನ್ನು ನಂಬಿ ತಮ್ಮ ರಾಜಕೀಯ ಜೀವನವನ್ನೇ ಹಾಳು ಮಾಡಿಕೊಂಡರು. ದೇವೇಗೌಡರ ಬದುಕು ರಾಜಕೀಯವಾಗಿ ಹದಗೆಡಲು ಕಾಂಗ್ರೆಸ್ ನೇರ ಕಾರಣ ಎಂದು ಹೆಚ್‌ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ತಾವು ಮುಕ್ತವಾಗಿ ಕೆಲಸ ಮಾಡಲು ಮತ್ತು ರೈತಪರ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿಯೊಂದಿಗೆ ಕೈಜೋಡಿಸಿರುವುದಾಗಿ ಸ್ಪಷ್ಟಪಡಿಸಿದರು.
ಸಿಎಂ ಕುರ್ಚಿ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರ ಹೆಸರೆತ್ತದೆ ಪರೋಕ್ಷವಾಗಿ ಟಾಂಗ್ ನೀಡಿದ ಕುಮಾರಸ್ವಾಮಿ, ಈಗ ಯಾರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ನಿಮ್ಮ ಲೀಡರ್ ಒಬ್ಬರು ಸಿಎಂ ಆಗಬೇಕು ಎಂಬ ಆಸೆಯಲ್ಲಿದ್ದಾರೆ. ಅವರಿಗೆ ಸರಿಯಾಗಿ ನಿದ್ದೆ ಬರುತ್ತಿದೆಯೇ ? ಏನೆಲ್ಲಾ ಸಂಪತ್ತು ಲೂಟಿ ಮಾಡಿದರೂ ಈ ದೇಶ ಬದುಕಿದೆ, ಆದರೆ ಇವರಿಗೆ ಮಾತ್ರ ತೃಪ್ತಿಯಿಲ್ಲ ಎಂದರು. ನನಗೆ ಮತ್ತೆ ಸಿಎಂ ಆಗುವ ಹಂಬಲವಿಲ್ಲ, ಬಡವನ ಕಣ್ಣೀರು ಒರೆಸುವ ಶಕ್ತಿ ಸಿಕ್ಕರೆ ಸಾಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಾ ಸಿದ್ದರಾಮಯ್ಯ ಅವರ ಕಾಲೆಳೆದ ಕುಮಾರಸ್ವಾಮಿ, ಅಮೆರಿಕಾದಲ್ಲೂ ಸಿದ್ದರಾಮಯ್ಯ ಅವರಂತಹ ಫೈನಾನ್ಸ್ ಮಿನಿಸ್ಟರ್ ಸಿಗಲು ಸಾಧ್ಯವಿಲ್ಲ. ಗೃಹಲಕ್ಷ್ಮಿ ಹಣ ನೀಡುವಲ್ಲಿ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಯಾರನ್ನೂ ಸಸ್ಪೆಂಡ್ ಮಾಡಿಲ್ಲ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದರೂ ಇವರಿಗೆ 5 ಸಾವಿರ ಕೋಟಿ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು. ಕಾಂಗ್ರೆಸ್ ಆಡಳಿತದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ನಬಾರ್ಡ್ ಹಣ ಕಡಿತದ ನೆಪ ಹೇಳಿ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆ ಶೂನ್ಯ. ಅಹಿಂದ ಎಂಬುದು ಕೇವಲ ಅವರ ರಾಜಕೀಯ ಬದುಕಿನ ಅಸ್ತ್ರವಾಗಿದೆ. ಇನ್ನು ಎತ್ತಿನಹೊಳೆ ಯೋಜನೆ ಹೆಸರಲ್ಲಿ ಕೋಟಿ ಕೋಟಿ ಹಣ ಖರ್ಚಾದರೂ ನೀರು ಎಲ್ಲಿ ಬಂತು ? ಎಂದು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಅಭಿವೃದ್ಧಿ ಹೆಸರಲ್ಲಿ ಬರೀ ಪೊಳ್ಳು ಭರವಸೆಗಳನ್ನು ನೀಡಲಾಗುತ್ತಿದೆ ಎಂದು ಗುಡುಗಿದರು.
ನನ್ನಿಂದ ಬೆಳೆದ ಚಿಲ್ಲರೆಗಳು ಇಂದು ನಾನು ಏನು ಮಾಡಿದ್ದೇನೆ ಎಂದು ಪ್ರಶ್ನಿಸುತ್ತಿದ್ದಾರೆ. ಜನರೇ ಮುಂದಿನ ದಿನಗಳಲ್ಲಿ ತೀರ್ಪು ನೀಡುತ್ತಾರೆ. ಭಗವಂತ ನನಗೆ ಐದನೇ ಬಾರಿ ಜೀವನ ಕೊಟ್ಟಿದ್ದಾನೆ. ರಾಜ್ಯದ ಜನರು ನಮಗೆ ಒಂದು ಬಾರಿ ಪೂರ್ಣ ಬಹುಮತದ ಅವಕಾಶ ನೀಡಲಿ. ಖಜಾನೆ ಖಾಲಿ ಮಾಡದೆ ಅಭಿವೃದ್ಧಿ ಮಾಡುವುದು ಹೇಗೆ ಎಂಬ ನಂಬಿಕೆ ನನಗಿದೆ ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.
