ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ!

WhatsApp Image 2026 06 22 at 7.32.06 AM

ಕಳೆದ ವರ್ಷ ಜನವರಿಯಲ್ಲಿ ಶೇ.15 ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಿಸಿದ್ದ ರಾಜ್ಯದ ಸಾರಿಗೆ ನಿಗಮಗಳು ಇದೀಗ ಮತ್ತೊಮ್ಮೆ ದರ ಏರಿಕೆಗೆ ಮುಂದಾಗುವ ಸಾಧ್ಯತೆ ಕಂಡುಬಂದಿದೆ. ಜಾಗತಿಕ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಡೀಸೆಲ್ ದರದಲ್ಲಿ ಗಣನೀಯ ಏರಿಕೆ ಸಂಭವಿಸಿದ್ದು, ಲೀಟರ್‌ಗೆ ಸರಾಸರಿ ₹8 ರಷ್ಟು ಹೆಚ್ಚಳವಾಗಿದೆ.

ಇದರಿಂದಾಗಿ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಆರ್ಥಿಕ ಒತ್ತಡಕ್ಕೆ ಒಳಗಾಗಿವೆ. ಇಂಧನ ವೆಚ್ಚದ ಹೆಚ್ಚಳ, ನಿರ್ವಹಣಾ ಖರ್ಚು ಹಾಗೂ ಕಾರ್ಯಾಚರಣಾ ವೆಚ್ಚಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದೆ.

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾಲ್ಕೂ ಸಾರಿಗೆ ನಿಗಮಗಳು ಟಿಕೆಟ್ ದರ ಪರಿಷ್ಕರಣೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರ ಬಳಿ ಅಧಿಕೃತವಾಗಿ ಮನವಿ ಸಲ್ಲಿಸಿವೆ. ನಿಗಮಗಳ ಪ್ರಕಾರ, ಪ್ರಸ್ತುತ ದರದಲ್ಲಿ ಸೇವೆ ನಿರ್ವಹಿಸುವುದು ಕಷ್ಟಕರವಾಗಿದ್ದು, ನಷ್ಟವನ್ನು ನಿಯಂತ್ರಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ. ಈ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದ್ದು, ಸಾರ್ವಜನಿಕರಿಗೆ ಹೆಚ್ಚುವರಿ ಭಾರ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಷಯ ಚರ್ಚೆಗೆ ಕಾರಣವಾಗಿದೆ.

ತಿಂಗಳಿಗೆ ₹40 ಕೋಟಿ ಹೆಚ್ಚುವರಿ ನಷ್ಟ; ವಾರ್ಷಿಕ ₹480 ಕೋಟಿ ದಾಟುವ ಆತಂಕ

ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ ಬರೋಬ್ಬರಿ ₹40 ಕೋಟಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ ₹480 ಕೋಟಿ ದಾಟುವ ಆತಂಕ ಎದುರಾಗಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕನಿಷ್ಠ ಶೇ.25 ರಷ್ಟು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವೆಂದು ಸಾರಿಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ. ಇಲ್ಲದಿದ್ದರೆ ನಿಗಮಗಳನ್ನು ನಡೆಸುವುದು ಕಷ್ಟಕರ ಎಂದೂ ಎಚ್ಚರಿಸಿದ್ದಾರೆ.

ವೇತನ ಬಾಕಿ, ಶಕ್ತಿ ಯೋಜನೆಯ ಬಾಕಿ ಅನುದಾನ – ನಿಗಮಗಳ ಮೇಲೆ ಹಲವು ಆರ್ಥಿಕ ಹೊರೆಗಳು

ನಿಗಮಗಳಿಗೆ ಕೇವಲ ಡೀಸೆಲ್ ದರ ಮಾತ್ರವಲ್ಲದೆ ಇತರ ಆರ್ಥಿಕ ಹೊರೆಗಳೂ ಬೆನ್ನುಬಿದ್ದಿವೆ. ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇ.12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ, ನೌಕರರಿಗೆ ನೀಡಬೇಕಿರುವ ಒಟ್ಟು ₹1,271 ಕೋಟಿ ವೇತನ ಹಿಂಬಾಕಿ ಹಣದಲ್ಲಿ ಸದ್ಯ ₹450 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ ₹821 ಕೋಟಿ ನೀಡಬೇಕಿದೆ.

ಇವೆಲ್ಲದರ ಜೊತೆಗೆ, ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ (ಮಹಿಳೆಯರ ಉಚಿತ ಪ್ರಯಾಣ) ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು ₹5,000 ಕೋಟಿಗಳಷ್ಟು ಅನುದಾನವೂ ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸಲು ಟಿಕೆಟ್ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ನಿಗಮಗಳು ವಾದಿಸಿವೆ.

ಪ್ರಯಾಣಿಕರ ತೀವ್ರ ಅಸಮಾಧಾನ; ಮಹಿಳೆಯರಿಂದ ಅರ್ಧ ಟಿಕೆಟ್ ದರ ಪಡೆಯಿರಿ ಎಂಬ ಸಲಹೆ

ಸರ್ಕಾರದ ಈ ದರ ಏರಿಕೆಯ ಆಲೋಚನೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಳೆದ ವರ್ಷವಷ್ಟೇ ದರ ಏರಿಕೆ ಮಾಡಿದ್ದೀರಿ, ಈಗ ಮತ್ತೆ ಬೆಲೆ ಏರಿಕೆ ಮಾಡುವುದು ಸರಿಯಲ್ಲ” ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವು ಪ್ರಯಾಣಿಕರು, ಟಿಕೆಟ್ ದರವನ್ನು ಸಂಪೂರ್ಣವಾಗಿ ಹೆಚ್ಚಿಸುವ ಬದಲು, ಸದ್ಯ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರಿಂದ ಕನಿಷ್ಠ ಅರ್ಧದಷ್ಟು ಟಿಕೆಟ್ ದರವನ್ನು ಪಡೆದುಕೊಳ್ಳಲಿ – ಇದರಿಂದ ನಿಗಮಗಳ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸದ್ಯ ನಿಗಮಗಳ ಆರ್ಥಿಕ ಹೊರೆ ತಪ್ಪಿಸಲು ಟಿಕೆಟ್ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದ್ದು, ಈ ಮನವಿಗೆ ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡುತ್ತಾರೆಯೇ ಅಥವಾ ಬೇರೆ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Exit mobile version