ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಶಿಷ್ಟ ನಗು ಮತ್ತು ಮಾತುಗಳಿಂದ ಗಮನ ಸೆಳೆದಿರುವ ಇನ್‌ಫ್ಲೂಯೆನ್ಸರ್ ಕಿಪ್ಪಿ ಕೀರ್ತಿಯ ಲವ್ ಸ್ಟೋರಿ ಡ್ರಾಮಾ ಸದ್ಯ ಸಂಚಲನ ಮೂಡಿಸಿದೆ. ಕಿಪ್ಪಿ ಕೀರ್ತಿಗಾಗಿ ರೀಲ್ಸ್ ಮಾಡಿ, ಚಾಕು ಹಿಡಿದು ಬೆದರಿಕೆ ಹಾಕಿದ್ದ ತುಮಕೂರಿನ ಮುತ್ತು ಎಂಬಾತನಿಗೆ ಕ್ಯಾತ್ಸಂದ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಮೂಲದ ಮುತ್ತು, ಕ್ಯಾತ್ಸಂದ್ರದಲ್ಲಿ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದ. ಈ ವ್ಯಾಪಾರದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಆಸಕ್ತಿಯನ್ನೂ ಹೊಂದಿದ್ದ. ಕಿಪ್ಪಿ ಕೀರ್ತಿ “ನನ್ನವಳು” ಎಂದು ಘೋಷಿಸಿ, “ಅವಳ ಹೆಸರು ಹೇಳಿದರೆ ನಾಲಿಗೆ ಕತ್ತರಿಸುವೆ” ಎಂದು ಚಾಕು ತೋರಿಸಿ ರೀಲ್ಸ್ ಮಾಡಿದ್ದ. ಈ ವಿಡಿಯೋ ವೈರಲ್ ಆಗಿದ್ದರಿಂದ ಕ್ಯಾತ್ಸಂದ್ರ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ಮುತ್ತುವನ್ನು ವಶಕ್ಕೆ ಪಡೆದರು.
ಪೊಲೀಸ್ ಠಾಣೆಯಲ್ಲಿ ಮುತ್ತುಗೆ ಎಚ್ಚರಿಕೆ ನೀಡಲಾಗಿದ್ದು, ಮತ್ತೊಮ್ಮೆ ಈ ರೀತಿಯ ವಿಡಿಯೋ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುತ್ತು ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ಮುಂದೆ ಚಾಕು ಹಿಡಿದು ರೀಲ್ಸ್ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ.
ಈ ಘಟನೆಯ ಹಿಂದೆ ಕಿಪ್ಪಿ ಕೀರ್ತಿಯನ್ನು ಕೇಂದ್ರೀಕರಿಸಿ ಇನ್ನೊಬ್ಬ ವ್ಯಕ್ತಿ ಸುನೀಲ್ ಎಂಬಾತನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದ. ಸುನೀಲ್ ತಾನು ಕಿಪ್ಪಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಮುತ್ತು ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಆದರೆ, ಕಿಪ್ಪಿ ಕೀರ್ತಿ ಮಂಗಳೂರು ಮೂಲದ ತನ್ನ ಪ್ರಿಯಕರನ ಜೊತೆಗೆ ಈಗಾಗಲೇ ಸಂಬಂಧದಲ್ಲಿದ್ದಾಳೆ. ಇತ್ತೀಚೆಗೆ ತಮ್ಮ ಬ್ರೇಕಪ್ ಬಳಿಕ ಮತ್ತೆ ಒಂದಾಗಿರುವುದಾಗಿ ಕಿಪ್ಪಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾಳೆ.
ಕಿಪ್ಪಿ ಕೀರ್ತಿಗೆ ಸಿನಿಮಾ ಕ್ಷೇತ್ರದಿಂದಲೂ ಆಫರ್‌ಗಳು ಬರುತ್ತಿದ್ದು, ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾಳೆ. ಆದರೆ, ಈ ಯುವಕರ ಹುಚ್ಚಾಟದಿಂದಾಗಿ ಕಿಪ್ಪಿಯ ಹೆಸರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಯುವಕರಿಗೆ ಎಚ್ಚರಿಕೆ ನೀಡಲಾಗಿದೆ.
ಮುತ್ತು ತನ್ನ ತಪ್ಪನ್ನು ಒಪ್ಪಿಕೊಂಡು, “ಇನ್ಮುಂದೆ ಈ ರೀತಿಯ ವಿಡಿಯೋ ಮಾಡುವುದಿಲ್ಲ, ಯುವಕರು ಯಾರೂ ಇಂತಹ ಕೃತ್ಯಕ್ಕೆ ಕೈ ಹಾಕಬಾರದು” ಎಂದು ಮನವಿ ಮಾಡಿದ್ದಾನೆ.