ಬೆಂಗಳೂರು, ಸೆ. 22: ಕಸ್ತೂರಿ ರಂಗನ್ ವರದಿ ಕುರಿತು ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸುವ ಮಹತ್ವದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯ ಕಲಾಪದಲ್ಲಿ ರಾಜ್ಯ ಸರ್ಕಾರದ ಪರವಾಗಿ ನಿರ್ಣಯಗಳನ್ನು ಮಂಡಿಸಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು. ಸಮಿತಿಯಲ್ಲಿ ಕಂದಾಯ ಅಧಿಕಾರಿಗಳು, ರೈತ ಪ್ರತಿನಿಧಿಗಳು, ಕೈಗಾರಿಕಾ ಪ್ರತಿನಿಧಿಗಳು, ವಿಷಯ ಪರಿಣಿತರು, ಶೈಕ್ಷಣಿಕ ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಳ್ಳಲು ನಿರ್ಧರಿಸಲಾಗಿದೆ.
ಸರ್ಕಾರದ ನಿರ್ಣಯಗಳು ಇಂತಿವೆ:
* ಯಥಾವತ್ತಾಗಿ 7ನೇ ಅಧಿಸೂಚನೆ ಒಪ್ಪಿರುವುದಿಲ್ಲ, ವರದಿಯ ನ್ಯೂನ್ಯತೆಗಳನ್ನು ಸರಿಪಡಿಸಬೇಕು
* ಇಎಸ್ಎ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶ, ಇತರೆ ಅರಣ್ಯಪ್ರದೇಶ ಮಾತ್ರ ಸೇರಿಸಬೇಕು. ಕೃಷಿ ಭೂಮಿ, ತೋಟ, ಜನವಸತಿ ಭೂಮಿ ಸೇರಿಸಬಾರದು
* ಬಗರ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ, ನ್ಯಾಯಾಂಗ ಪ್ರಕರಣ ಪರಿಗಣಿಸಬೇಕು, ಭೌತಿಕವಾಗಿ ಸರ್ವೇ ಮಾಡಿ ಗುರುತಿಸಬೇಕು
* ರಾಜ್ಯ ಸರ್ಕಾರಿಂದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳು, ರೈತ ಪ್ರತಿನಿಧಿ, ಕೈಗಾರಿಕಾ ಉದ್ಯಮ ಪ್ರತಿನಿಧಿ, ವಿಷಯ ಪರಿಣಿತರು, ಶೈಕ್ಷಣಿಕ ತಜ್ಞರು, ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚನೆ
* ಭೌತಿಕ ಸರ್ವೇ ಸೇರಿದಂತೆ ಕಸ್ತೂರಿ ರಂಗನ್ ವರದಿಯ ನ್ಯೂನ್ಯತೆ ಸರಿಪಡಿಸಲು ಒಂದು ವರ್ಷದ ಕಾಲಾವಕಾಶಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿಗೆ ನಿರ್ಧಾರ
* ಒಂದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಬಾರದು ಮತ್ತು ರಾಜ್ಯ ಸರ್ಕಾರದ ವಿಷಯದ ಬಗ್ಗೆ ಚರ್ಚೆ ನಡೆಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕು
* ರಾಜ್ಯಮಟ್ಟದ ಸಮಿತಿಯ ಸಹಾಯಕ್ಕೆ ಗ್ರಾಮ ಮಟ್ಟದಲ್ಲೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಬೇಕು
ರಾಜ್ಯಮಟ್ಟದ ಸಮಿತಿಗೆ ನೆರವಾಗಲು ಗ್ರಾಮ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸುವ ಪ್ರಸ್ತಾವವಿದೆ.
ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವನ್ನು ವಿಧಾನಸಭೆಯಲ್ಲಿದ್ದ ವಿಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಇದರಿಂದ ವರದಿ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕದ ನಿಲುವು ಮತ್ತೊಮ್ಮೆ ವಿಧಾನಸಭೆಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
