ಕಾರವಾರ: ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾರೀ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ಕಡಲ ತೀರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಡಲ ತೀರದ ವಿವಿಧ ಭಾಗಗಳಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ರೆಡ್ ಜೋನ್ ಎಂದು ಗುರುತಿಸಲಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಲೋಮೀಟರ್ ವರೆಗೆ ದಾಖಲಾಗುತ್ತಿದೆ. ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗಿರುವುದರಿಂದ ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರದ ಬಳಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಬಿರುಗಾಳಿ ಪರಿಣಾಮ ಸಮುದ್ರದಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತದ ಸೂಚನೆಯಂತೆ ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರ ಸಂಚಾರವನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಕಡಲ ತೀರದ ಪ್ರವೇಶ ದ್ವಾರಗಳಲ್ಲಿ ಎಚ್ಚರಿಕಾ ಫಲಕಗಳನ್ನು ಅಳವಡಿಸಲಾಗಿದ್ದು, ಸಮುದ್ರಕ್ಕಿಳಿಯದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದೆ.
ವೀಕೆಂಡ್ ಹಿನ್ನೆಲೆ ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ವಿಶೇಷವಾಗಿ ಯುವಕರು ಹಾಗೂ ಕುಟುಂಬ ಸಮೇತ ಬಂದಿರುವ ಪ್ರವಾಸಿಗರು ಸಮುದ್ರದ ಅಲೆಗಳ ನಡುವೆ ಫೋಟೋ, ವಿಡಿಯೋ ತೆಗೆಯಲು ಮುಂದಾಗುತ್ತಿದ್ದಾರೆ. ಕೆಲವರು ಅಪಾಯವನ್ನು ಲೆಕ್ಕಿಸದೇ ಸಮುದ್ರದೊಳಗೆ ಇಳಿದು ಹುಚ್ಚಾಟ ಮೆರೆದಿರುವ ದೃಶ್ಯಗಳು ಕಂಡುಬಂದಿವೆ. ಇದರಿಂದ ಲೈಫ್ ಗಾರ್ಡ್ ಸಿಬ್ಬಂದಿ ಪ್ರವಾಸಿಗರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಅಲೆಗಳ ಅಬ್ಬರ ತೀವ್ರವಾಗಿರುವುದರಿಂದ ನೀರಿನ ಮಟ್ಟ ಏಕಾಏಕಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಮಕ್ಕಳೊಂದಿಗೆ ಸಮುದ್ರ ತೀರಕ್ಕೆ ಬರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಅಧಿಕಾರಿಗಳು ನೀಡಿದ್ದಾರೆ.
ಮತ್ತೊಂದೆಡೆ ಮೀನುಗಾರರಿಗೂ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಹಲವು ಮೀನುಗಾರಿಕಾ ಬೋಟ್‌ಗಳು ತೀರದಲ್ಲೇ ನಿಲ್ಲಿಸಲಾಗಿದ್ದು, ಸಮುದ್ರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ.
