ಕರ್ನಾಟಕ ಹವಾಮಾನ: ರಾಜ್ಯದ ಹಲವೆಡೆ ಮಳೆ ಸಾಧ್ಯತೆ!

ಹ್ಮೋ (22)

ಕರ್ನಾಟಕದಲ್ಲಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಮೇಲೂ ಬೀರುವ ನಿರೀಕ್ಷೆಯಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಸೆಪ್ಟೆಂಬರ್ 18 ಅಥವಾ 19ರ ವೇಳೆಗೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲೂ ಮಳೆಯ ಚಟುವಟಿಕೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನು ಸೆಪ್ಟೆಂಬರ್ 19ರ ಬಳಿಕ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯಲ್ಲೂ ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಮೇಲ್ಮೈ ಗಾಳಿಯ ಸಾಧ್ಯತೆಯನ್ನು ಸೂಚಿಸಲಾಗಿದೆ. ಉತ್ತರ ಒಳನಾಡಿನಲ್ಲೂ ಇದೇ ರೀತಿಯ ಹವಾಮಾನ ಪರಿಸ್ಥಿತಿ ಮುಂದುವರಿಯುವ ಮುನ್ಸೂಚನೆ ಇದೆ.

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 17ರಂದು ಗರಿಷ್ಠ ತಾಪಮಾನ ಸುಮಾರು 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ನಗರದ ವಾತಾವರಣ ಭಾಗಶಃ ಮೋಡದಿಂದ ಕೂಡಿರುವ ಸಾಧ್ಯತೆಯಿದೆ.

ರಾಜ್ಯದ ವಿವಿಧ ನಗರಗಳ ತಾಪಮಾನದಲ್ಲೂ ವ್ಯತ್ಯಾಸ ಕಂಡುಬರಲಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಗರಿಷ್ಠ 31 ಡಿಗ್ರಿ ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದಲ್ಲಿ 31-22, ಮೈಸೂರಿನಲ್ಲಿ 30-22, ಮಂಡ್ಯದಲ್ಲಿ 31-22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಡಿಕೇರಿಯಲ್ಲಿ 27-20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ವರದಿ ತಿಳಿಸಿದೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ತುಸು ಹೆಚ್ಚಾಗಿರಲಿದೆ. ಬಳ್ಳಾರಿ ಮತ್ತು ಯಾದಗಿರಿಯಲ್ಲಿ ಗರಿಷ್ಠ 35 ಡಿಗ್ರಿ, ರಾಯಚೂರಿನಲ್ಲಿ 36 ಡಿಗ್ರಿ, ವಿಜಯಪುರ ಹಾಗೂ ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಒಂದು ಕಡೆ ಮಳೆಯ ವಾತಾವರಣ ಮುಂದುವರಿದರೆ, ಮತ್ತೊಂದೆಡೆ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆಯೂ ಕಾಣಿಸಿಕೊಳ್ಳಬಹುದು.

ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆಯಿದೆ. ಮಳೆ ಹಾಗೂ ಗುಡುಗು-ಮಿಂಚಿನ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವುದು, ಅಗತ್ಯವಿಲ್ಲದಿದ್ದರೆ ತೆರೆದ ಪ್ರದೇಶಗಳಲ್ಲಿ ಸಂಚಾರ ತಪ್ಪಿಸುವುದು ಮತ್ತು ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಗಮನಿಸುವುದು ಸೂಕ್ತ.

Exit mobile version