ರಾಜ್ಯದಲ್ಲಿ ಸಂಚಾರ ದಂಡ ರಿಯಾಯಿತಿ ಯೋಜನೆಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

Web Photo Editor (25)

ಬೆಂಗಳೂರು, ಜೂ. 22: ಸರ್ಕಾರ ಘೋಷಿಸಿರುವ ಬಾಕಿ ಉಳಿದಿರುವ ಸಂಚಾರ ದಂಡ (ಇ-ಚಲನ್) ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಯ ಮೊದಲ ದಿನವೇ ರಾಜ್ಯಾದ್ಯಂತ 96.73 ಲಕ್ಷ ರೂ. ದಂಡದ ಮೊತ್ತ ಸಂಗ್ರಹವಾಗಿದ್ದು, 32,486 ಪ್ರಕರಣಗಳು ಇತ್ಯರ್ಥಗೊಂಡಿವೆ.

ಜೂನ್ 21ರಿಂದ ಜುಲೈ 10ರವರೆಗೆ ಈ ವಿಶೇಷ ರಿಯಾಯಿತಿ ಅವಕಾಶ ಜಾರಿಯಲ್ಲಿದ್ದು, 2026ರ ಮೇ ತಿಂಗಳಿಗೂ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಉಳಿದಿರುವ ಪ್ರಕರಣಗಳ ದಂಡವನ್ನು ಅರ್ಧ ಮೊತ್ತದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ದಂಡಗಳಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಪ್ರಸ್ತುತ ರಾಜ್ಯದಾದ್ಯಂತ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳಿಂದ 2,727 ಕೋಟಿ ರೂ. ದಂಡ ವಸೂಲಿ ಆಗಬೇಕಿದೆ. ಇದರಲ್ಲೇ ಬೆಂಗಳೂರಿನ ಪಾಲು ಅತಿ ಹೆಚ್ಚಾಗಿದ್ದು, ನಗರದಲ್ಲಿಯೇ 3.37 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಿಂದ 1,843 ಕೋಟಿ ರೂ. ದಂಡ ಸಂಗ್ರಹವಾಗಬೇಕಿದೆ.

ಸಂಚಾರ ದಂಡ ಪಾವತಿಗೆ ರಿಯಾಯಿತಿ ನೀಡುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಮೂರು ಬಾರಿ ಹಾಗೂ 2025ರಲ್ಲಿ ಎರಡು ಬಾರಿ ಇಂತಹ ಅವಕಾಶ ನೀಡಲಾಗಿತ್ತು. ಈಗ ಆರನೇ ಬಾರಿಗೆ ಸರ್ಕಾರ ಶೇಕಡಾ 50ರಷ್ಟು ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿದೆ.

ಕಳೆದ ವರ್ಷವೂ ಬಾಕಿ ಉಳಿದಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ರಿಯಾಯಿತಿ ಘೋಷಿಸಿತ್ತು. ಈ ವಿಶೇಷ ಅವಕಾಶಕ್ಕೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಒಟ್ಟು 89 ಕೋಟಿ ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಅಲ್ಲದೆ, 30 ಲಕ್ಷಕ್ಕೂ ಹೆಚ್ಚು ಇ-ಚಲನ್ ಪ್ರಕರಣಗಳು ಇತ್ಯರ್ಥಗೊಂಡು, ಬಾಕಿ ದಂಡ ವಸೂಲಾತಿಯಲ್ಲಿ ದಾಖಲೆ ನಿರ್ಮಾಣವಾಗಿತ್ತು.

ದಂಡ ಪಾವತಿ ಮಾಡುವ ವಿಧಾನ

ವಾಹನ ಸವಾರರು ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್, ಬಿಟಿಪಿ-ಅಸ್ತ್ರಂ (BTP-Astra) ಆ್ಯಪ್, ಸಮೀಪದ ಸಂಚಾರ ಪೊಲೀಸ್ ಠಾಣೆಗಳು, ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ವೆಬ್‌ಸೈಟ್‌ಗಳ ಮೂಲಕ ತಮ್ಮ ವಾಹನದ ವಿರುದ್ಧ ದಾಖಲಾಗಿರುವ ದಂಡದ ವಿವರಗಳನ್ನು ಪರಿಶೀಲಿಸಿ ಪಾವತಿಸಬಹುದು.

ಇದರ ಜೊತೆಗೆ, ಬೆಂಗಳೂರಿನ 12 ಪ್ರಮುಖ ಸ್ಥಳಗಳಲ್ಲಿ ಸಂಚಾರ ಪೊಲೀಸರು ವಿಶೇಷ ಕೌಂಟರ್‌ಗಳನ್ನು ಆರಂಭಿಸಿದ್ದು, ವಾಹನ ಸವಾರರು ನೇರವಾಗಿ ಭೇಟಿ ನೀಡಿ ಬಾಕಿ ದಂಡವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರ ನೀಡಿರುವ ಈ ಸೀಮಿತ ಅವಧಿಯ ರಿಯಾಯಿತಿ ಯೋಜನೆಯ ಪ್ರಯೋಜನ ಪಡೆದು, ಬಾಕಿ ಉಳಿದಿರುವ ಇ-ಚಲನ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವಂತೆ ವಾಹನ ಸವಾರರಿಗೆ ಸಂಚಾರ ಇಲಾಖೆ ಮನವಿ ಮಾಡಿದೆ.

ರಾಜ್ಯದಲ್ಲಿ ಬಾಕಿ ಪ್ರಕರಣಗಳ ಸ್ಥಿತಿ

ಪ್ರಸ್ತುತ ರಾಜ್ಯದಲ್ಲಿ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ₹2,727 ಕೋಟಿ ದಂಡ ಪಾವತಿಯಾಗಬೇಕಿದೆ. ಆ ಪೈಕಿ ಬೆಂಗಳೂರಿನಲ್ಲಿಯೇ 3.37 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ₹1,843 ಕೋಟಿ ದಂಡ ವಸೂಲಿಯಾಗಬೇಕಿದೆ.

ಆರನೇ ಬಾರಿಗೆ ರಿಯಾಯಿತಿ

2023ರಲ್ಲಿ ಮೂರು ಬಾರಿ ಮತ್ತು 2025ರಲ್ಲಿ ಎರಡು ಬಾರಿ ಸಂಚಾರ ದಂಡ ಪಾವತಿಗೆ ರಿಯಾಯಿತಿ ಅವಕಾಶ ನೀಡಲಾಗಿತ್ತು. ಈ ಮೂಲಕ ಸದ್ಯದ ದಂಡ ಪಾವತಿ ರಿಯಾಯಿತಿ ಅವಕಾಶವನ್ನು ಆರನೇ ಬಾರಿಗೆ ನೀಡಲಾಗಿದೆ.

Exit mobile version