ವಿದ್ಯಾರ್ಥಿನಿಯರಿಗೆ ‘ಮುಟ್ಟಿನ ಕಪ್’ ನೀಡಲು ಮುಂದಾದ ಕರ್ನಾಟಕ ಸರ್ಕಾರ

Untitled design 2026 01 23T184115.531

ಬೆಂಗಳೂರು: ಮಹಿಳಾ ಆರೋಗ್ಯ ಮತ್ತು ಪರಿಸರ ಸ್ನೇಹಿ ನೈರ್ಮಲ್ಯದತ್ತ ಕರ್ನಾಟಕ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ 9ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ (Menstrual Cups) ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದ ಉಂಟಾಗುವ ಕಸದ ಸಮಸ್ಯೆ ಮತ್ತು ಆರ್ಥಿಕ ಹೊರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಆರ್ಥಿಕ ಲಾಭ ಮತ್ತು ಪರಿಸರ ಸಂರಕ್ಷಣೆ

ಜನವರಿ 7ರಂದು ಸರ್ಕಾರ ಘೋಷಿಸಿದ ಈ ಯೋಜನೆಯು ಸುಮಾರು ಒಂದು ಮಿಲಿಯನ್‌ಗಿಂತಲೂ ಹೆಚ್ಚು ವಿದ್ಯಾರ್ಥಿನಿಯರಿಗೆ ತಲುಪಲಿದೆ. ಸ್ಯಾನಿಟರಿ ಪ್ಯಾಡ್‌ಗಳು ಒಮ್ಮೆ ಬಳಸಿ ಬಿಸಾಡುವಂತಹವುಗಳಾಗಿದ್ದು, ಇವುಗಳ ವಿತರಣೆಗೆ ಸರ್ಕಾರಕ್ಕೆ ಭಾರಿ ವೆಚ್ಚವಾಗುತ್ತಿತ್ತು. ಆದರೆ ಮುಟ್ಟಿನ ಕಪ್‌ಗಳನ್ನು 5 ರಿಂದ 10 ವರ್ಷಗಳವರೆಗೆ ಮರುಬಳಕೆ ಮಾಡಬಹುದಾಗಿದೆ. ಈ ಹೊಸ ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು 16 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಅಲ್ಲದೆ, ಲಕ್ಷಾಂತರ ಟನ್ ಪ್ಲಾಸ್ಟಿಕ್ ಮಿಶ್ರಿತ ಸ್ಯಾನಿಟರಿ ಪ್ಯಾಡ್‌ನ ಕಸ ಪರಿಸರ ಸೇರುವುದು ತಪ್ಪಲಿದೆ.

ಮುಟ್ಟಿನ ಕಪ್‌ಗಳ ಪ್ರಯೋಜನಗಳೇನು?

ಒಂದು ಮುಟ್ಟಿನ ಕಪ್ ಸಾಮಾನ್ಯ ಪ್ಯಾಡ್‌ಗಿಂತ ಮೂರು ಪಟ್ಟು ಹೆಚ್ಚು ಹರಿವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಸೋರಿಕೆ ಅಥವಾ ಕಲೆಯಾಗುವ ಭಯವಿಲ್ಲದೆ ವಿದ್ಯಾರ್ಥಿನಿಯರು ದಿನವಿಡೀ ನಿರಾಳವಾಗಿರಬಹುದು. ಪ್ಯಾಡ್‌ಗಳ ಬಳಕೆಯಿಂದ ಉಂಟಾಗುವ ಚರ್ಮದ ದದ್ದುಗಳು (Rashes), ಕಿರಿಕಿರಿ ಮತ್ತು ಸೋಂಕುಗಳ ಅಪಾಯ ಈ ಕಪ್‌ಗಳಲ್ಲಿ ತೀರಾ ಕಡಿಮೆ.ಇವುಗಲೊಟ್ಟಿಗೆ ಮುಟ್ಟಿನ ಸಮಯದಲ್ಲಿ ಕಾಡುವ ಆತಂಕ ಮತ್ತು ಮುಜುಗರ ದೂರವಾಗುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಶಾಲಾ ಹಾಜರಾತಿ ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರದ ಮುಂದಿರುವ ಸವಾಲುಗಳು 

ಮುಟ್ಟಿನ ಕಪ್‌ಗಳ ಬಳಕೆ ಪ್ಯಾಡ್‌ಗಳಿಗಿಂತ ಭಿನ್ನವಾಗಿದೆ. ಇದನ್ನು ಶರೀರದ ಒಳಭಾಗದಲ್ಲಿ ಧರಿಸಬೇಕಿರುವುದರಿಂದ ಆರಂಭದಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ತರಬೇತಿಯ ಅಗತ್ಯವಿದೆ. ಅಲ್ಲದೆ, ಪ್ರತಿ ತಿಂಗಳು ಬಳಸುವ ಮುನ್ನ ಮತ್ತು ನಂತರ ಇದನ್ನು ಬಿಸಿ ನೀರಿನಲ್ಲಿ ಕುದಿಸಿ ಕ್ರಿಮಿನಾಶಕ (Sterilization) ಮಾಡುವುದು ಕಡ್ಡಾಯ. ಈ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಸೂಕ್ತ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ. ಅಸಾನ್ ಎಂಬ ಸಂಸ್ಥೆಯು ಈಗಾಗಲೇ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಪ್‌ಗಳನ್ನು ವಿತರಿಸಿ ಯಶಸ್ವಿ ಪ್ರಯೋಗ ನಡೆಸಿದೆ.

ಕರ್ನಾಟಕದ ಈ ಮಾದರಿ ಯೋಜನೆಯು ಯಶಸ್ವಿಯಾದರೆ, ಇದು ಭಾರತದ ಇತರೆ ರಾಜ್ಯಗಳಿಗೆ ಮಾತ್ರವಲ್ಲದೆ ವಿಶ್ವಕ್ಕೇ ಮಾದರಿಯಾಗಲಿದೆ. ಮುಟ್ಟಿನ ಬಗ್ಗೆ ಇರುವ ಮುಜುಗರವನ್ನು ಹೋಗಲಾಡಿಸಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಶಿಕ್ಷಣ ಮುಂದುವರಿಸಲು ಇದು ಸಹಕಾರಿಯಾಗಲಿದೆ.

Exit mobile version