ಬೆಂಗಳೂರು: ಕರ್ನಾಟಕ ದಶಕಗಳಿಂದ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಸಾಂಪ್ರದಾಯಿಕ ‘ಸ್ಪೋಚ್ ಕ್ಯಾಪ್’ಗೆ ಇನ್ನು ಗುಡ್ಬೈ ಹೇಳಲಿದ್ದು, ಅದರ ಸ್ಥಾನವನ್ನು ಆಧುನಿಕ ‘ಪಿ-ಕ್ಯಾಪ್’ (P-Cap) ಪಡೆಯಲಿದೆ. ತೆಲಂಗಾಣ ಪೊಲೀಸ್ ಇಲಾಖೆಯ ಮಾದರಿಯಲ್ಲಿರುವ ಈ ಹೊಸ ಕ್ಯಾಪ್‌ಗಳನ್ನ ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಅಕ್ಟೋಬರ್ 28, 2025, ಮಂಗಳವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಸಮ್ಮಖದಲ್ಲಿ ಪಿ-ಕ್ಯಾಪ್ ಬಿಡುಗಡೆ ಮಾಡಿಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಹೊಸ ಪಿ-ಕ್ಯಾಪ್ಗಳನ್ನು ವಿತರಿಸಲಿದ್ದಾರೆ.
ಹೊಸ ಪಿ-ಕ್ಯಾಪ್ ವಿತರಣೆಯ ಈ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೊಲೀಸ್ ಇಲಾಖೆ ವಿಶೇಷ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲಾ ಪೊಲೀಸ್ ಆಯುಧಗಳು ಮತ್ತು ಜಿಲ್ಲೆಗಳಿಂದ ತಲಾ ಒಬ್ಬರು ಪೊಲೀಸ್ ಕಾನ್ಸ್ಟೆಬಲ್ (ಪಿಸಿ) ಅಥವಾ ಹೆಡ್ ಕಾನ್ಸ್ಟೆಬಲ್ (ಹೆಚ್.ಸಿ.) ಅನ್ನು ಈ ಕಾರ್ಯಕ್ರಮಕ್ಕಾಗಿ ನಿಯೋಜಿಸಲಾಗಿದೆ. ನಿಯೋಜಿತ ಸಿಬ್ಬಂದಿ ಅಕ್ಟೋಬರ್ 27, 2025, ಸೋಮವಾರ ಬೆಳಗ್ಗೆ 9:00 ಗಂಟೆಗೆ ವಿಧಾನಸೌಧ ಭದ್ರತಾ ಜವಾಬ್ದಾರಿಯಿರುವ ಡಿ.ಸಿ.ಪಿ. (ಡಿಪ್ಯುಟಿ ಕಮಿಷನರ್ ಆಫ್ ಪೊಲೀಸ್) ಅವರ ಮುಂದೆ ಬ್ಯಾಂಕೆಟ್ ಹಾಲ್ನಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸರ್ಕಾರದ ಸೂಚನೆ ನೀಡಲಾಗಿದೆ.
ಹಳೆಯ ‘ಸ್ಪೋಚ್ ಕ್ಯಾಪ್’ ಅನ್ನು ದಶಕಗಳಿಂದ ಭಾರತೀಯ ಪೊಲೀಸರು ಧರಿಸುತ್ತಿದ್ದರು. ಆದರೆ, ಕಾಲಕ್ಕೆ ತಕ್ಕಂತೆ ಸಮಗ್ರ ಪೊಲೀಸ್ ವರ್ದಿಯಲ್ಲಿ ಆಧುನಿಕ ಬದಲಾವಣೆ ತರುವ ಅಗತ್ಯವನ್ನು ಸರ್ಕಾರ ಮನಗಂಡಿತು. ಹೊಸ ‘ಪಿ-ಕ್ಯಾಪ್’ ಅದರ ಆಧುನಿಕ ವಿನ್ಯಾಸ, ಹಗುರವಾದ ತೂಕ ಮತ್ತು ಅತ್ಯಾಧುನಿಕ ಕಪ್ಪು ಬಣ್ಣದಿಂದ ಕೂಡಿದೆ. ಇದು ಪೊಲೀಸ್ ಸಿಬ್ಬಂದಿಗಳಿಗೆ ಹೆಚ್ಚು ಆರಾಮದಾಯಕವಾಗಿದ್ದು, ಅವರ ನೋಟಕ್ಕೆ ಹೆಚ್ಚು ಶಿಸ್ತುಬದ್ಧ ಮತ್ತು ಪ್ರಭಾವಶಾಲಿ ರೂಪ ನೀಡುತ್ತದೆ. ತೆಲಂಗಾಣದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿರುವ ಈ ಮಾದರಿಯೇ ಕರ್ನಾಟಕಕ್ಕೂ ಆಯ್ಕೆಯಾಗಿದೆ.
