ಬೆಂಗಳೂರು: ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಅಥವಾ ಬೇರೆ ಬೇರೆ ಕಾರಣಕ್ಕೆ ಅಶ್ಲೀಲ ಫೋಟೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕಿರುಕುಳ ನೀಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇಂತಹ ಪ್ರಕರಣದಲ್ಲಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ಖಡಕ್ ಸೂಚನೆಯನ್ನು ನೀಡಿದೆ.
ಖಾಸಗಿ ಅಥವಾ ಆಪ್ತ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ವ್ಯಕ್ತಿಯ ಅನುಮತಿಯಿಲ್ಲದೆ ಹಂಚಿಕೆ ಮಾಡುವುದು, ರಿವೆಂಜ್ ಪೋರ್ನ್, ಸೆಕ್ಸ್‌ಟಾರ್ಷನ್ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿರುವ ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಜನರಲ್ ಎಂಎ ಸಲೀಂ, ಇಂತಹ ಪ್ರಕರಣಗಳಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಸುತ್ತೋಲೆಯಲ್ಲಿ, ಕೆಲವು ಪೊಲೀಸ್ ಠಾಣೆಗಳು ಇಂತಹ ದೂರುಗಳನ್ನು ದಾಖಲಿಸಲು ನಿರಾಕರಿಸುತ್ತಿರುವುದು ಅಥವಾ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ನೀಡಿ ದೂರುಗಳನ್ನು ತಿರಸ್ಕರಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಒಬ್ಬ ವ್ಯಕ್ತಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿರುವುದು, ಅದನ್ನು ಸಾರ್ವಜನಿಕವಾಗಿ ಹಂಚಲು ಅಥವಾ ಇತರರಿಗೆ ಕಳುಹಿಸಲು ನೀಡಿದ ಅನುಮತಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಹಿಂದಿನ ಒಪ್ಪಿಗೆಯನ್ನು ಕಾರಣವನ್ನಾಗಿ ಮಾಡಿಕೊಂಡು FIR ದಾಖಲಿಸಲು ನಿರಾಕರಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ಬಳಸಿ ಹಣ, ಲೈಂಗಿಕ ಅನುಕೂಲ ಅಥವಾ ಯಾವುದೇ ರೀತಿಯ ಲಾಭ ಪಡೆಯಲು ಒತ್ತಾಯಿಸಿದರೆ, ಭಾರತೀಯ ನ್ಯಾಯ ಸಂಹಿತೆ (BNS)-2023ರ ಅಡಿಯಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಕಾನೂನು ಕ್ರಮಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ತಿಳಿಸಲಾಗಿದೆ.
ಘಟನೆ ನಡೆದ ಪೊಲೀಸ್ ಠಾಣೆಯ ವ್ಯಾಪ್ತಿ ಬೇರೆ ಆಗಿದ್ದರೂ, ಸಂತ್ರಸ್ತರಿಗೆ ತೊಂದರೆ ಆಗದಂತೆ ಮೊದಲು ‘ಜೀರೋ FIR’ ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳು ಅಥವಾ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೆಯಾದ ಆಪ್ತ ವಿಷಯಗಳನ್ನು ತಕ್ಷಣ ತೆಗೆದುಹಾಕಲು ಸಂಬಂಧಿತ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ನೋಟಿಸ್ ನೀಡಬೇಕು. ಜೊತೆಗೆ ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸೂಚಿಸಲಾಗಿದೆ.
ಸಂತ್ರಸ್ತರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಬೇಕು. ಪೊಲೀಸ್ ಸಿಬ್ಬಂದಿ ದೂರುದಾರರೊಂದಿಗೆ ಗೌರವಯುತ ಮತ್ತು ಸಂವೇದನಾಶೀಲವಾಗಿ ವರ್ತಿಸಬೇಕು ಎಂದು ಆದೇಶಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ FIR ದಾಖಲಿಸಲು ನಿರಾಕರಿಸುವ ಅಥವಾ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
