ಬೆಂಗಳೂರು: ಸಚಿವ ಸ್ಥಾನ ಬೇಕು ಎಂದು ನಾನು ದೆಹಲಿಗೆ ಹೋಗಿಲ್ಲ, ಮುಂದೆ ಹೋಗುವುದೂ ಇಲ್ಲ ಎಂದು ಕರ್ನಾಟಕ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಬೇಕು ಎಂದು ದೆಹಲಿಗೆ ಹೋಗಿಲ್ಲ. ಎರಡು ವರ್ಷಗಳಲ್ಲಿ ನಾನು ದೆಹಲಿಗೆ ಹೋಗಿರುವುದು ಕೇವಲ ಎರಡು ಬಾರಿ ಮಾತ್ರ. ಅದೂ ಇಲಾಖಾ ಕಾರ್ಯಕ್ರಮಗಳಿಗೆ. ನಾನು ಯಾವತ್ತೂ ಸ್ಥಾನಮಾನ ಬೇಕು ಎಂದು ದೆಹಲಿಗೆ ಹೋದವನಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನದ ಬಗ್ಗೆ ತಮ್ಮ ವಿಚಾರವನ್ನು ವಿವರಿಸಿದ ರಾಮಲಿಂಗಾರೆಡ್ಡಿ, ಸಚಿವ ಸ್ಥಾನಕ್ಕಾಗಿ ನಾನು ಪ್ರಭಾವ ಬೀರಿಲ್ಲ. ಅರ್ಹತೆ ಇದ್ದರೆ ಕೊಡ್ತಾರೆ, ಇಲ್ಲದಿದ್ದರೆ ಇಲ್ಲ. ಇದಕ್ಕಾಗಿ ನಾನು ದೆಹಲಿಗೆ ಓಡಾಡುವ ವ್ಯಕ್ತಿ ಅಲ್ಲ ಎಂದು ಹೇಳಿದರು.ಕೇಂದ್ರದಲ್ಲಿ ಕಂಗ್ರೆಸ್ ನೇತೃತ್ವದಲ್ಲಿ ಸರಕಾರದ ಸಚಿವ ಸ್ಥಾನಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ರಾಜ್ಯದ ಹಲವಾರು ನೇತಾರರು ದೆಹಲಿ ಭೇಟಿ ನೀಡಿರುವುದರಿಂದ ಈ ಹೇಳಿಕೆ ಗಮನಾರ್ಹವಾಗಿದೆ.
ಇನ್ನೂ ವೋಟ್ ಚೋರಿ ಬಗ್ಗೆಯೂ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿಯವರು 2014ರಿಂದಲೂ ವೋಟ್ ಚೋರಿ ಮಾಡುತ್ತಿದ್ದಾರೆ. ಬಿಜೆಪಿಯವರ ವೋಟ್ ಚೋರಿ ಹೊಸದೇನಲ್ಲ. ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಕುತಂತ್ರ ಮಾಡಿದೆ ಎಂದು ಕಟುವಾಗಿ ವಿಮರ್ಶಿಸಿದರು.ಕೇಂದ್ರ ಚುನಾವಣಾ ಆಯೋಗವೂ ಬಿಜೆಪಿ ಜೊತೆ ಶಾಮೀಲಾಗಿದೆ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದರು.
ವಂದೇ ಮಾತರಂ ಗೀತೆ ರಾಷ್ಟ್ರಗೀತೆ ಆಗಬೇಕಿತ್ತು ಎಂಬ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಬ್ರಿಟಿಷರು ದೇಶ ಬಿಟ್ಟು ಹೋದಾಗಲೇ ನಮ್ಮ ರಾಷ್ಟ್ರಗೀತೆ, ಸಂವಿಧಾನ, ಕಾನೂನು ಹೇಗೆ ಇರಬೇಕು ಎಂಬುದನ್ನು ಸ್ವಾತಂತ್ರ್ಯ ಬಂದ ನಂತರ ಆಗಿನ ಪ್ರಧಾನಿಗಳು ಮತ್ತು ಮಂತ್ರಿ ಮಂಡಲ ತೀರ್ಮಾನಿಸಿದ್ದಾರೆ. ಈಗ 78 ವರ್ಷಗಳ ನಂತರ ಬಿಜೆಪಿ ಇದರ ವಿರೋಧ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ಜನಗಣಮನದ ಬಗ್ಗೆ ಪ್ರಶ್ನೆ ಎತ್ತಿದ ಅವರು, ವಂದೇ ಮಾತರಂವನ್ನು ಬಿಜೆಪಿಯವರು ಹಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುತ್ತೇವೆ. ಬಿಜೆಪಿಗಿಂತ ವಂದೇ ಮಾತರಂ ಗೀತೆಯ ಮೇಲೆ ಕಾಂಗ್ರೆಸ್‌ಗೆ ಹೆಚ್ಚು ಗೌರವ ಇದೆ” ಎಂದರು.
ಬಿಜೆಪಿ ನೆಹರು, ಇಂದಿರಾ ಗಾಂಧಿ, ಸರ್ದಾರ್ ಪಟೇಲ್ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ ಸಚಿವರು, “ಸರ್ದಾರ್ ಪಟೇಲ್ ಅವರೇ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ಈಗ ಬಿಜೆಪಿ ಇತಿಹಾಸವನ್ನು ವಕ್ರೀಕರಿಸುತ್ತಿದೆ. ವಾಟ್ಸಾಪ್ ಯೂನಿವರ್ಸಿಟಿಗಳ ಮೂಲಕ 700 ಜನರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.





