ಬೆಂಗಳೂರು: ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು (ಆಗಸ್ಟ್ 14) ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಹಾಗೂ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಸಂಖ್ಯಾಬಲ ಇದ್ದರೂ, ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಆಡಳಿತ ಪಕ್ಷಕ್ಕೆ ರಾಜಕೀಯ ಸವಾಲು ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಸಲೀಂ ಅಹ್ಮದ್ ಅವರು ವಿಧಾನಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ವಿನಯ್ ಕಾರ್ತಿಕ್, ನಾಗರಾಜ್ ಯಾದವ್ ಸೇರಿದಂತೆ ಹಲವು ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು. ಸಂಪುಟ ವಿಸ್ತರಣೆಯೊಂದಿಗೆ ಸಭಾಪತಿ ಸ್ಥಾನಕ್ಕೂ ಕಾಂಗ್ರೆಸ್ ಹೈಕಮಾಂಡ್ ಸಲೀಂ ಅಹ್ಮದ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಇನ್ನೊಂದೆಡೆ ಎನ್‌ಡಿಎ ಅಭ್ಯರ್ಥಿಯಾಗಿ ಪಿ.ಎಚ್. ಪೂಜಾರ್ ನಾಮಪತ್ರ ಸಲ್ಲಿಸಿದರು. ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕ ಭೋಜೇಗೌಡ, ಸಿ.ಟಿ. ರವಿ, ರವಿಕುಮಾರ್, ಹೇಮಲತಾ ನಾಯಕ್, ಹಣಮಂತ ನಿರಾಣಿ ಸೇರಿದಂತೆ ಬಿಜೆಪಿ–ಜೆಡಿಎಸ್ ನಾಯಕರು ಪೂಜಾರ್‌ಗೆ ಬೆಂಬಲ ಸೂಚಿಸಿದರು.
ಸಂಖ್ಯಾಬಲ ಇಲ್ಲದಿದ್ದರೂ ಅಭ್ಯರ್ಥಿ ಯಾಕೆ?
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷಗಳಿಗಿಂತ ಏಳು ಸ್ಥಾನಗಳ ಹೆಚ್ಚುವರಿ ಸಂಖ್ಯಾಬಲವಿದೆ. ಆದರೂ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯಪಾಲರು ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಿದ್ದು, ಮೊದಲ ದಿನ ಸಂತಾಪ ಸೂಚನೆ ಕಾರ್ಯಕಲಾಪ ನಡೆಸಿದ ಅವರು ಇಂದು ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಸಲೀಂ ಅಹ್ಮದ್ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ವಿಧಾನಸಭೆ ಸಭಾಧ್ಯಕ್ಷರ ಚುನಾವಣೆಗೆ ಬಿಜೆಪಿ ಬಹಿಷ್ಕಾರ
ಇದಕ್ಕೂ ನಡುವೆ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಯನ್ನು ಬಿಜೆಪಿ ಬಹಿಷ್ಕರಿಸುವುದಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಘೋಷಿಸಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸಿ ತನ್ನ ಲೆಟರ್‌ಹೆಡ್‌ನಲ್ಲೇ ಸಭಾಧ್ಯಕ್ಷರ ಹೆಸರನ್ನು ಪ್ರಕಟಿಸಿರುವುದು ಸಂವಿಧಾನ ಬಾಹಿರ ಕ್ರಮ ಎಂದು ಅವರು ಆರೋಪಿಸಿದರು.
ಇದು ಪೀಠದ ವಿರುದ್ಧದ ಪ್ರತಿಭಟನೆ ಅಲ್ಲ; ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆಯ ವಿರುದ್ಧದ ಹೋರಾಟ ಎಂದು ಸ್ಪಷ್ಟಪಡಿಸಿದ ಅಶೋಕ್, ಚುನಾವಣೆಯ ಬಳಿಕ ಸಭಾಧ್ಯಕ್ಷರ ಪೀಠಕ್ಕೆ ಎಂದಿನಂತೆ ಗೌರವ ನೀಡುವುದಾಗಿ ಹೇಳಿದರು. ಸಭಾಧ್ಯಕ್ಷರು ಪಕ್ಷಾತೀತವಾಗಿ ನಡೆದುಕೊಂಡು ಆಡಳಿತ ಮತ್ತು ಪ್ರತಿಪಕ್ಷ ಎರಡನ್ನೂ ಸಮಾನವಾಗಿ ನಡೆಸಬೇಕು ಎಂಬುದು ಬಿಜೆಪಿಯ ನಿರೀಕ್ಷೆಯಾಗಿದೆ ಎಂದರು.
ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಪ್ರಕ್ರಿಯೆಯಲ್ಲಿಯೂ ಸಂವಿಧಾನಾತ್ಮಕ ಸಂಪ್ರದಾಯಗಳನ್ನು ಮೀರಿ ನಡೆದುಕೊಂಡಿರುವುದಾಗಿ ಆರೋಪಿಸಿದ ಅಶೋಕ್, ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿಸಿದ್ದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ ಎಂದು ವಾಗ್ದಾಳಿ ನಡೆಸಿದರು.
